Menu

‘ಜನಿವಾರ’ ಪ್ರಕರಣಕ್ಕೆ ಕೇಂದ್ರದ ಪರೀಕ್ಷಾ ಪ್ರಾಧಿಕಾರಗಳ ನೀತಿ ಕಾರಣ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಜನಿವಾರ ಪ್ರಕರಣದಂತಹ ಘಟನೆ ನಡೆಯಲು ಕೇಂದ್ರ ಸರಕಾರದ ಪರೀಕ್ಷಾ ಪ್ರಾಧಿಕಾರಗಳ ನೀತಿಗಳು ಕಾರಣ. ಹೀಗಾಗಿ, ಇಂತಹ ನೀತಿಗಳ ಸಡಿಲಿಕೆಗೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದ್ದಾರೆ.

ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, CET ಪರೀಕ್ಷೆ ತಪಾಸಕರು, ವಿಧ್ಯಾರ್ಥಿಯ ಜನಿವಾರ ತೆಗೆಸಿರುವ ಪ್ರಕರಣ ತೀವ್ರ ಆಘಾತ ಉಂಟು ಮಾಡಿದೆ. ಈ ಘಟನೆ ಆ ವಿದ್ಯಾರ್ಥಿಯ ಮನಸ್ಸನ್ನು ಎಷ್ಟು ಘಾಸಿಗೊಳಿಸಿರಬಹುದು ಎಂಬುದನ್ನು ಊಹಿಸಲಾಧ್ಯ. ಇದನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಿಜೆಪಿಗರು ವಿನಾಕಾರಣ‌ ರಾಜಕಾರಣ‌ಮಾಡುತ್ತಾ ಸಿದ್ದರಾಮಯ್ಯ ಸರ್ಕಾರದ ಕುರಿತು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿರುವುದು ಮತ್ತಷ್ಟು ಕಳವಳಕಾರಿ. ಜನಿವಾರ ತೆಗೆಸುವುದು, ಮಾಂಗಲ್ಯ ತೆಗೆಸುವುದು(ಕಳೆದ ಬಾರಿಯ ಕೆಎ‌ಎಸ್ ಪರೀಕ್ಷೆಯಲ್ಲಿ ನಡೆದ ಘಟನೆ) ಹಿಜಾಬ್ ತೆಗೆಸುವುದು ಒಬ್ಬ ವ್ಯಕ್ತಿಯ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಕೆಲಸ, ಖಂಡಿತ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಕೇಂದ್ರ ಸರ್ಕಾರದ ಪರೀಕ್ಷಾ ಪ್ರಾಧಿಕಾರಗಳೇ ಮಾಡಿರುವ ಕಾನೂನು ಹಾಗೂ ವಸ್ತ್ರ ಸಂಹಿತೆ (Dress Code) ನಿಯಮಗಳು ಭಾರತದಾದ್ಯಂತ ಅನ್ವಯವಾಗುತ್ತವೆ. ಈ ನಿಯಮಕ್ಕೂ ಸಿದ್ದರಾಮಯ್ಯ ಸರ್ಕಾರಕ್ಕೂ ಅಥವಾ ನಿಯಮ ಪಾಲನೆ ಮಾಡಿದ ಪರೀಕ್ಷಾ ಕೇಂದ್ರದ ತಪಾಸಕರಿಗೂ ಯಾವ ರೀತಿಯ ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಸ್ತ್ರ ಸಂಹಿತೆ NEET, CET ಪರೀಕ್ಷೆಗಳಲ್ಲಿ ನಿಷ್ಪಕ್ಷಪಾತತೆ ಮತ್ತು ಶುದ್ಧತೆಯನ್ನು ಕಾಪಾಡುವ ಉದ್ದೇಶ ಒಳಿತೆ. ಆದರೆ ಕೇಂದ್ರ ಸರ್ಕಾರದ ಪರೀಕ್ಷಾ ಮಾರ್ಗಸೂಚಿಗಳಲ್ಲಿ ಕೆಲವೊಂದನ್ನು ಮಾರ್ಪಾಡು ಮಾಡಿ ಧಾರ್ಮಿಕ ಸ್ವಾತಂತ್ರ್ಯ ಕಾಪಾಡಲು, ರಕ್ಷಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ NEET ಪರೀಕ್ಷೆ National Testing Agency (NTA) ಮೂಲಕ ನಡೆಯುವ ಪರೀಕ್ಷೆ. CET ಪರೀಕ್ಷೆಯು ರಾಜ್ಯ ಮಟ್ಟದಿದ್ದರೂ, ತಂತ್ರಜ್ಞಾನ ಮೂಲಕದ ನಕಲು ತಡೆಗೆ ಕೇಂದ್ರದ ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲಾ ಶಿಕ್ಷಣ ಇಲಾಖೆಯೂ ಅನುಸರಿಸುತ್ತದೆ. ಪರೀಕ್ಷೆಗೆ ಉದ್ದ ಅಂಗಿ, ಜಾಕೆಟ್, ಕೋಟ್, ಕೈದಾರ, ಜನಿವಾರ, ಬೂಟ್, ಕೈಗೆ ಯಾವುದೇ ದಾರ, ವಾಚು, ದಪ್ಪ/ಅತಿಯಾದ ಮೇಕಪ್, ಗಟ್ಟಿ ಅಲಂಕಾರ,ದುಪ್ಪಟ,ಚೈನ್
ಕಿವಿ ಗೆಜ್ಜೆ, ಸರ, ಉಂಗುರ, ಎಲ್ಲಾ ಆಭರಣಗಳ ಧಾರಣೆ, ಮುಚ್ಚಿದ ಪಾದರಕ್ಷೆ ನಿಷಿದ್ಧ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಅನ್ವಯ, ಧಾರ್ಮಿಕ ಆಚರಣೆಗೆ ಹಕ್ಕಿದೆ ಆದರೆ ಪರೀಕ್ಷಾ ಕೇಂದ್ರದ ಭದ್ರತೆ ತಪಾಸಣೆಯ ನಂತರ ಮಾತ್ರ ಧರಿಸಲು ಅನುಮತಿ ಇದೆ. “ಪರೀಕ್ಷೆಯಲ್ಲಿ ಶುದ್ಧತೆಯನ್ನು ಕಾಪಾಡುವುದು ಪ್ರಧಾನ, ಆದರೆ ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಬಾರದು” ಎಂಬ ಸಮತೋಲನದ ತೀರ್ಪನ್ನು ನ್ಯಾಯಾಲಯಗಳು ನೀಡಿವೆ. ಆದ್ದರಿಂದ ತಮ್ಮ ಇಲಾಖೆ ವತಿಯಿಂದ ಕೇಂದ್ರ ಸರ್ಕಾರಕ್ಕೆ‌‌ ಪತ್ರ ಬರೆದು, ಪರೀಕ್ಷಾ ಮಾರ್ಗ ಸೂಚಿಯ ವಸ್ತ್ರಸಂಹಿತೆ ನೀತಿಯಲ್ಲಿ ಅವಶ್ಯಕ ಬದಲಾವಣೆ‌ ಮಾಡುವಂತೆ ಕೋರುವ ಸಂಬಂಧ ಮುಂದಿನ ಕ್ರಮವಹಿಸಲು ಕೋರಿದ್ದಾರೆ.

Related Posts

Leave a Reply

Your email address will not be published. Required fields are marked *