ಬೆಂಗಳೂರು: ರಾಜ್ಯ ಬಿಜೆಪಿ ನಿಯೋಗವು ವಿಧಾನಸೌಧದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ 18 ಬಿಜೆಪಿ ಶಾಸಕರ ಅಮಾನತು ಕೂಡಲೇ ರದ್ದುಗೊಳಿಸುವಂತೆ ಒತ್ತಾಯಿಸಿ ಸೋಮವಾರ ಮನವಿ ಸಲ್ಲಿಸಿದೆ.
ಕಳೆದ ಮಾರ್ಚ್ 21 ರಂದು ಹನಿಟ್ರ್ಯಾಪ್ ಪ್ರಸ್ತಾಪದ ವೇಳೆ, ಸ್ಪೀಕರ್ ಕುರ್ಚಿಗೆ ಅಗೌರವ ತೋರಿಸಿದ ಮತ್ತು ಮಸೂದೆಯ ಹರಿದ ಪ್ರತಿಗಳನ್ನು ಅವರ ಮೇಲೆ ಎಸೆದ ಆರೋಪದ ಮೇಲೆ 18 ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಒಳಗೊಂಡ ಹನಿಟ್ರ್ಯಾಪ್ ಪ್ರಕರಣವನ್ನು ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸಿ, ಕಲಾಪಕ್ಕೆ ಅಡ್ಡಿಪಡಿಸಿದ ನಂತರ ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡಲಾಗಿದೆ.
ಸ್ಪೀಕರ್ ಗೆ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, “ನಾವು ಸ್ಪೀಕರ್ ಅವರನ್ನು ಭೇಟಿ ಮಾಡಿ ನಮ್ಮ ಮನವಿ ಸಲ್ಲಿಸಿದ್ದೇವೆ. ಶಾಸಕರು ಕಮಿಟಿ ಸಭೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿರುವುದು ನ್ಯಾಯಯುತ ಕ್ರಮವಲ್ಲ ಎಂದರು.
ಹಿಂದೆ ನೂರಾರು ಇದೇ ರೀತಿಯ ಘಟನೆಗಳು ನಡೆದಿವೆ. ಬಿಜೆಪಿಯ ಶಾಸಕರು ಸ್ಪೀಕರ್ ಗೆ ಅವಮಾನಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಸಿಡಿ ವಿಷಯದ ಬಗ್ಗೆ ನಾವು ವಿರೋಧ ಪಕ್ಷವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಪ್ರತಿಭಟನೆಯು ಪಕ್ಷದ ನಿಲುವು ಮತ್ತು ಸ್ಪೀಕರ್ ವಿರುದ್ಧ ಹೋಗುವ ಯಾವುದೇ ಉದ್ದೇಶ ಇರಲಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ” ಎಂದು ಅಶೋಕ್ ಹೇಳಿದರು.
ಸ್ಪೀಕರ್ ನಮ್ಮ ಮನವಿಗೆ ಗೌರವಯುತವಾಗಿ ಪ್ರತಿಕ್ರಿಯಿಸಿ ಅಮಾನತು ವಿಷಯವನ್ನು ಪರಿಶೀಲಿಸುವುದಾಗಿ ಹಾಗೂ ಕಾನೂನು ಸಚಿವರೊಂದಿಗೆ ಚರ್ಚಿಸಿದ ನಂತರ ತಮ್ಮ ಅಭಿಪ್ರಾಯ ತಿಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ವಿಧಾನಸಭಾ ಅಧಿವೇಶನವು ಸುಗಮವಾಗಿ ನಡೆಯಬೇಕೆಂದು ಸ್ಪೀಕರ್ ಬಯಸುವುದಾಗಿ ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರ್ಕಾರದೊಂದಿಗೆ ಸಮಾಲೋಚಿಸುವುದಾಗಿ ಹೇಳಿದರು.
ಅವರ ಪ್ರತಿಕ್ರಿಯೆ ಸಕಾರಾತ್ಮಕವಾಗಿತ್ತು” ಎಂದು ಅಶೋಕ್ ತಿಳಿಸಿದರು.