“ತಂತ್ರಜ್ಞಾನದಿಂದಲೇ ಅಭಿವೃದ್ಧಿ, ಸಂಪತ್ತು, ಶಿಕ್ಷಣ ಎನ್ನುವಂತಾಗಿದೆ. ಪ್ರತಿಯೊಂದು ಏಳಿಗೆಯೂ ಸಹ ತಂತ್ರಜ್ಞಾನದ ಮೂಲಕ ನೋಡುವಂತಾಗಿದೆ. ಗ್ರಾಮೀಣ ಭಾಗದ ಯುವಕರಿಗೆ ಹೊಸ ತಂತ್ರಜ್ಞಾನದ ಶಿಕ್ಷಣ ನೀಡಿರುವ ಕಿಯೋನಿಕ್ಸ್ ಉದ್ಯೋಗ ಸೃಷ್ಟಿ ಮಾಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಶ್ಲಾಘಿಸಿದರು.
ಬೆಂಗಳೂರಿನಲ್ಲಿ ಕಿಯೋನಿಕ್ಸ್ ಸಂಸ್ಥೆಯ ಇ-ಕಾಮರ್ಸ್ ಪೋರ್ಟಲ್ ಅನ್ನು ಡಿಸಿಎಂ ಉದ್ಘಾಟಿಸಿ ಮಾತನಾಡಿದರು. “ನೂತನ ತಂತ್ರಜ್ಞಾನದ ವಿಚಾರದಲ್ಲಿ ಕಿಯೋನಿಕ್ಸ್ ಸಂಸ್ಥೆ ದೇಶಕ್ಕೆ ಮಾದರಿ. ಅನೇಕ ರಾಜ್ಯಗಳಿಗೆ ತನ್ನ ಸೇವೆಯನ್ನು ನೀಡುತ್ತಿದೆ. ಇಂತಹ ಉತ್ತಮವಾದ ಸಂಸ್ಥೆ ಒಂದಷ್ಟು ವರ್ಷಗಳಿಂದ ಮಂಕಾಗಿತ್ತು. ಇದಕ್ಕೆ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಶರತ್ ಬಚ್ಚೇಗೌಡ ಅವರ ಆಲೋಚನೆ ಸೇರಿ ಹೊಸ ರೂಪ ಸಿಕ್ಕಿದೆ” ಎಂದರು.
“ನಾನು ಶಾಲೆಯಲ್ಲೆ ಓದುವಾಗ ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರಿನಲ್ಲಿ ಪ್ರಾರಂಭ ಮಾಡಲಾಗುತ್ತಿತ್ತು. ಆಗ ಎಸ್.ಎಂ.ಕೃಷ್ಣ ಅವರು ಕೇಂದ್ರ ಕೈಗಾರಿಕಾ ಸಚಿವರಾಗಿದ್ದರೆ, ವೀರಪ್ಪ ಮೊಯಿಲಿ ಅವರು ರಾಜ್ಯದಲ್ಲಿ ಕೈಗಾರಿಕಾ ಸಚಿವರಾಗಿದ್ದರು. ಈಗ ವಿದ್ಯುನ್ಮಾನ ತಂತ್ರಜ್ಞಾನದಲ್ಲಿ ನಾವು ಬೆಳೆದಿದ್ದೇವೆ. ಇಡೀ ಪ್ರಪಂಚವೇ ಬೆಂಗಳೂರನ್ನು ನೋಡುವಂತಾಗಿದೆ. ನಾನು ಹತ್ತನೇ ತರಗತಿ ಓದುವಾಗ ಕ್ಯಾಲ್ಕುಲೇಟರ್ ಸಹ ಇರಲಿಲ್ಲ. ನಂತರದ ದಿನಗಳಲ್ಲಿ ಎಲೆಕ್ಟ್ರಾನಿಕ್ ವಾಚ್ ಬರುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆಯಿತು” ಎಂದು ಹೇಳಿದರು.
“ನೂತನ ವೆಬ್ ಸೈಟಿನ ಮೂಲಕ ಅನೇಕ ಉದ್ದಿಮೆಗಳಿಗೆ ಕಿಯೋನಿಕ್ಸ್ ನೆರವಾಗಲಿ. ಇನ್ನೂ ಎತ್ತರಕ್ಕೆ ಬೆಳೆಯಲಿ. ಸಂಸ್ಥೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು” ಎಂದರು.