ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯನ್ನೇ ದಂಗು ಬಡಿಸಿದ ನಿವೃತ್ತ ಡಿಜಿ ಹಾಗೂ ಐಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿ ರುವ ಪೊಲೀಸರು ಓಂ ಪ್ರಕಾಶ್ ಪತ್ನಿ ಪಲ್ಲವಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..ತಾಯಿ ಪಲ್ಲವಿ ಹಾಗೂ ಸಹೋದರಿ ಕೃತಿ ವಿರುದ್ಧ ಓಂ ಪ್ರಕಾಶ್ ಪುತ್ರ ಕಾರ್ತಿಕೇಶ್ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ
ಮಧ್ಯಾಹ್ನ ಊಟಕ್ಕೆ ಎರಡು ಮೀನು ತರಿಸಿಕೊಂಡಿದ್ದರು. ಡೈನಿಂಗ್ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಊಟದ ತಟ್ಟೆ ಟೇಬಲ್ ಬಳಿ ಪತ್ತೆಯಾಗಿದ್ದು ಡೈನಿಂಗ್ ಹಾಲ್‌ನಲ್ಲಿ ರಕ್ತಸಿಕ್ತವಾಗಿ ಓಂ ಪ್ರಕಾಶ್ ಅವರ ಶವ ಪತ್ತೆಯಾಗಿದೆ. ಖಾರದಪುಡಿ ಎರಚಿ ಕೊಲೆ ಮಾಡಿರುವ ಕುರುಹುಗಳು ಪತ್ತೆಯಾಗಿವೆ. ಚಾಕು ಅಷ್ಟೇ ಅಲ್ಲದೇ ಬಿಯರ್ ಬಾಟಲ್‌ನಿಂದ ಚುಚ್ಚಿರುವ ಸಾಧ್ಯತೆಯಿದೆ. ಮೃತದೇಹದ ಪಕ್ಕ ಒಡೆದ ಬಿಯರ್ ಬಾಟಲ್ ಪತ್ತೆಯಾಗಿದೆ.
ಕಾರ್ತಿಕೇಶ್ ದೂರಿನಲ್ಲಿ ಹಲವು ಮಾಹಿತಿ ನೀಡಿದ್ದಾರೆ. ನನ್ನ ತಾಯಿ ಪಲ್ಲವಿ ನಮ್ಮ ತಂದೆ ಮಾಜಿ ಡಿಜಿಪಿ ಓಂ ಪ್ರಕಾಶ್ಗೆ ಕಳೆದ ಒಂದು ವಾರದಿಂದ ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ತಂದೆ ಅವರ ಸಹೋದರಿ ಸರೀತಾ ಕುಮಾರಿಯವರ ಮನೆಯಲ್ಲಿ ವಾಸವಿದ್ದರು. ನಂತರ ನನ್ನ ತಂಗಿ ಕೃತಿ 2 ದಿನಗಳ ಹಿಂದೆ ಸರೀತಾ ಕುಮಾರಿಯವರ ಮನೆಗೆ ಹೋಗಿ ತಂದೆಯವರನ್ನು ಮನೆಗೆ ಬರುವಂತೆ ಪೀಡಿಸಿ ಕರೆದುಕೊಂಡು ಬಂದಿದ್ದಳು. ಏಪ್ರಿಲ್ 20 ರ ಸಂಜೆ ನಾನು ದೊಮ್ಮಲೂರಿ ನಲ್ಲಿರುವ ಕರ್ನಾಟಕ ಗಾಲ್ಫ್ ಆಸೋಸಿಯಷನ್ನಲ್ಲಿರಬೇಕಾದರೆ, ನಮ್ಮ ಪಕ್ಕದ ಮನೆಯವರಾದ ಜಯಶ್ರೀ ಶ್ರೀಧರನ್ ಕರೆಮಾಡಿ ನಿಮ್ಮ ತಂದೆ ಓಂ ಪ್ರಕಾಶ್ ದೇಹ ಕೆಳಗಡೆ ಬಿದ್ದಿದೆ ಎಂದು ತಿಳಿಸಿದರು. ತಕ್ಷಣ ನಾನು ಮನೆಗೆ ಬಂದು ನೋಡಿದೆ. ಮನೆಯಲ್ಲಿ ಪೊಲೀಸ್ ಮತ್ತು ಸಾರ್ವಜನಿಕರು ಇದ್ದರು. ನಮ್ಮ ತಂದೆ ಯವರ ತಲೆಗೆ ಗಾಯವಾಗಿ ಮತ್ತು ಮೈತುಂಬ ರಕ್ತವಾಗಿತ್ತು. ದೇಹದ ಪಕ್ಕದಲ್ಲಿ ಹೊಡೆದಿರುವ ಬಾಟಲ್ ಮತ್ತು ಚಾಕು ಇತ್ತು. ನಂತರ ತಂದೆಯವರ ದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ನಮ್ಮ ತಾಯಿ ಪಲ್ಲವಿ, ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ನಮ್ಮ ತಂದೆಯೊಂದಿಗೆ ಜಗಳ ಮಾಡುತ್ತಿದ್ದರು. ನಮ್ಮ ತಾಯಿ ಪಲ್ಲವಿ ಮತ್ತು ತಂಗಿ ಕೃತಿ ನಮ್ಮ ತಂದೆಯನ್ನು ಕೊಲೆ ಮಾಡಿರುವ ಬಗ್ಗೆ ಶಂಕೆಯಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸ ಬೇಕು ಎಂದು ದೂರಿನಲ್ಲಿ ಕಾರ್ತಿಕೇಶ್ ಉಲ್ಲೇಖಿಸಿದ್ದಾರೆ.
ಪಲ್ಲವಿ ಮತ್ತು ಕೃತಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ಭಾನುವಾರ ಸಂಜೆಯೇ ಠಾಣೆಗೆ ಕರೆ ಕರೆತಂದಿದ್ದರು. ರಾತ್ರಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಸೋಮವಾರ ಬೆಳಗ್ಗೆ ಇಬ್ಬರನ್ನೂ ಹೆಚ್‌ಎಸ್‌ಆರ್ ಲೇಔಟ್ ಠಾಣೆಗೆ ಕರೆತಂದು ಬಂಧಿಸಲಾಗಿದೆ. ಪೊಲೀಸರಿಗೆ ಆವಾಜ್ ಹಾಕಿದ ಇಬ್ಬರೂ, ‘ಏಯ್ ನನ್ನ ಮುಟ್ಟಬೇಡಿ, ಯಾಕೆ ಟಚ್ ಮಾಡುತ್ತೀರಾ’ ಎಂದು ಗದರಿದ್ದಾರೆ. ಇಬ್ಬರನ್ನು ಠಾಣೆಯೊಳಗೆ ಕರೆದೊಯ್ಯಲು ಹತ್ತಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. 30 ನಿಮಿಷದ ಬಳಿಕ ಕೃತಿ ಕಾರಿನಿಂದ ಇಳಿದು ಪೊಲೀಸ್ ಠಾಣೆಯ ಬೇಸ್‌ಮೆಂಟ್‌ಗೆ ಹೋಗಿದ್ದಾಳೆ.
ಪಲ್ಲವಿ ಮತ್ತು ಕೃತಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ಆತ್ಮ ರಕ್ಷಣೆಗಾಗಿ ಕೊಲೆ ಮಾಡಿರುವುದಾಗಿ ಪತ್ನಿ ಪಲ್ಲವಿ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾಳೆ. ಮಡಿವಾಳ ಎಸಿಪಿ ವಾಸುದೇವ್ ಮುಂದೆ ಹೇಳಿಕೆ ದಾಖಲಿಸಿದ್ದು, ಇಬ್ಬರಿಂದರೂ ಹೇಳಿಕೆ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದು ವರಿಸಿದ್ದಾರೆ.
ಆತ್ಮ ರಕ್ಷಣೆಗಾಗಿ ಕೊಲೆ ಮಾಡಿದ್ದಾಗಿ ಪಲ್ಲವಿ ಹೇಳಿದ್ದು, ಪುತ್ರಿ ಕೃತಿಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ತಂಗಿ ಸರಿತಾ ಮನೆಯಲ್ಲಿದ್ದ ಓಂ ಪ್ರಕಾಶ್‌ರನ್ನು ಕೃತಿಯೇ ಕರೆತಂದಿದ್ದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ಕೃತಿ ಮತ್ತು ಪಲ್ಲವಿ ಮುಂಚಿತವಾಗಿಯೇ ಸಂಚು ಹೂಡಿ ಕೊಲೆ ಮಾಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಕೃತಿ ಬಗ್ಗೆ ಅಪಾರ ಕನಸು ಕಂಡಿದ್ದ ಓಂ ಪ್ರಕಾಶ್, ಮದುವೆ ಬಗ್ಗೆ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗಿದೆ. ಹೆಚ್ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಎಂಸಿಎಚ್ಎಸ್ ಕ್ಲಬ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯ ನಂತರ ವಿಲ್ಸನ್ ಗಾರ್ಡನ್‌ನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಜೋಯಿಡಾ ತಾಲೂಕಿನ ಗಣೇಶ ಗುಡಿಯ ಬಾಡಗುಂದ ಗ್ರಾಮದಲ್ಲಿ 17 ಎಕ್ರೆ ಜಮೀನು ಖರೀದಿ ಮಾಡಿದ್ದು, ಈ 2 ಜಮೀನನ್ನು ಮಗ ಕಾರ್ತೀಕೇಶ್ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದ 17 ಎಕ್ರೆಯಲ್ಲಿ 10 ಎಕ್ರೆ ಬೇರೆಯವರ ಹೆಸರಲ್ಲಿ ಮಾಡಲಾಗಿತ್ತು. ಸಾಮಜೋಯಿಡಾದಲ್ಲಿ ಗಂಧ, ಸಾಗುವಾನಿ ಸೇರಿದಂತೆ ವಾಣಿಜ್ಯ ಬೆಳೆಯನ್ನು ಬೆಳೆದಿದ್ದು, ಇಲ್ಲಿಯೇ ಗೆಸ್ಟ್ ಹೌಸ್ ನಿರ್ಮಿಸಿದ್ದರು. ಗಣೇಶ ಗುಡಿಯ ಬಾಡಗುಂದ ಗ್ರಾಮದಲ್ಲಿದ್ದ 5 ಎಕ್ರೆ ಜಮೀನನ್ನು ರಿವರ್ ರಾಫ್ಟಿಂಗ್ ಮಾಡಲು ಲೀಸ್‌ಗೆ ನೀಡಿದ್ದರು. ಉಳಿದ 10 ಎಕ್ರೆ ಜಮೀನನ್ನು ಬೇನಾಮಿ ಇಟ್ಟಿದ್ದು, ಈ ಜಮೀನನ್ನು ತನ್ನ ಸಹೋದರಿಯ ಹೆಸರಿಗೆ ಮಾಡಲು ಸಿದ್ಧರಾಗಿದ್ದರು. ಈ ವಿಚಾರಕ್ಕೆ ಪತ್ನಿ ಹಾಗೂ ಮಗಳ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗುತ್ತಿದೆ. ಮನೆಯಲ್ಲಿ ಕಿತ್ತಾಟ ಜಾಸ್ತಿಯಾದಾಗ ಜೋಯಿಡಾದ ಗೆಸ್ಟ್ ಹೌಸ್‌ಗೆ ಬಂದು ಗೆಳೆಯರ ಜೊತೆ ಸಮಯ ಕಳೆಯುತ್ತಿದ್ದರು. ಓಂ ಪ್ರಕಾಶ್ ಮಾನಸಿಕವಾಗಿ ನೊಂದಿದ್ದರು ಎಂದು ಸಹವರ್ತಿಗಳು ಹೇಳಿದ್ದಾರೆ.