ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಯುವತಿಯಿಂದ ₹2.70 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ ಮೂಲದ ಯುವತಿ ನೀಡಿದ ದೂರಿನ ಅನ್ವಯ ಪತ್ನೋಲ್ ಕಲಾಂದರ್ ಖಾನ್ ಮತ್ತು ವೀರೇಶ್ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಎಂಜಿನಿಯರಿಂಗ್ ಪದವೀಧರೆ ಯುವತಿ ಉದ್ಯೋಗಾವಕಾಶಗಳ ಬಗ್ಗೆ ಆನ್‌ಲೈನಲ್ಲಿ ಹುಡುಕಾಡುತ್ತಿದ್ದರು. ಈ ವೇಳೆ ಒಂದು ವೆಬ್‌ಸೈಟ್‌ನಲ್ಲಿ ಬೆಸ್ಕಾಂ ಕಚೇರಿಯಲ್ಲಿ ಟೆಕ್ನಿಕಲ್ ಎಂಜಿನಿಯರ್ ಉದ್ಯೋಗ ಖಾಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದ ನಗರ್ತಪೇಟೆಯ ಕಚೇರಿ ವಿಳಾಸಕ್ಕೆ ಇಂಟರ್‌ವ್ಯೂಗೆ ಹೋಗಿದ್ದಾರೆ.
ಇಂಟರ್‌ವ್ಯೂ ಮಾಡಿದ ಶ್ರೀಧರ್ ಎಂಬಾತ ನಿಮ್ಮ ವಿದ್ಯಾಭ್ಯಾಸಕ್ಕೆ ಬಾಷ್, ಟೆಕ್ ಮಹೀಂದ್ರ ಇತರೆ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಸಿಗಲಿದೆ. ನನಗೆ ಪರಿಚಯವಿರುವ ಮೂಲಕ ಕೆಲಸ ಕೊಡಿಸುತ್ತೇನೆ ಎಂದು ವಿನೋದಿನಿ ಎಂಬಾಕೆಯ ಮೊಬೈಲ್ ಸಂಖ್ಯೆ ನೀಡಿದ್ದಾನೆ. ಬಳಿಕ ವಿನೋದಿನಿ ಯುವತಿಗೆ ಕರೆ ಮಾಡಿ ಜೆ.ಪಿ.ನಗರ ಕಾಫಿಶಾಪ್‌ಗೆ ಬರುವಂತೆ ಕರೆದಿದ್ದಾರೆ.
ಯುವತಿ ವಿನೋದಿನಿ ಮತ್ತು ಕಲಂದರ್ ಖಾನ್‌ನನ್ನು ಭೇಟಿಯಾಗಿದ್ದಾರೆ. ಈ ವೇಳೆ ಕಲಂದರ್ ಖಾನ್, ಬಾಷ್ ಹಾಗೂ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆ. ಆದರೆ 2.70 ಲಕ್ಷ ರೂ. ನೀಡಬೇಕು, ಮುಂಗಡವಾಗಿ 30 ಸಾವಿರ ಕೊಡಬೇಕು. ಆಫರ್ ಲೆಟರ್ ಕೊಟ್ಟ ಬಳಿಕ ಉಳಿದ ಹಣ ಕೊಡಬೇಕು ಎಂದು ಹೇಳಿದ್ದಾನೆ. ಯುವತಿ ಒಪ್ಪಂದದಂತೆ ಮುಂಗಡವಾಗಿ ಕಲಂದರ್‌ಗೆ ಆನ್‌ಲೈನ್‌ನಲ್ಲಿ 30 ಸಾವಿರ ರೂ. ವರ್ಗಾಯಿಸಿದ್ದಾರೆ.
ನಂತರ ಕಲಂದರ್ ಖಾನ್ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಖಾಲಿ ಇಲ್ಲ. ಬಾಷ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಆಮೇಲೆ ಬಳಿಕ ಬಾಷ್ ಕಂಪನಿಯಲ್ಲಿ ಅನುಭವ ಕೇಳುತ್ತಿದ್ದಾರೆ. ಸದ್ಯಕ್ಕೆ ಆ ಕಂಪನಿಯಲ್ಲಿ ಕೆಲಸ ಇಲ್ಲ. ಎಚ್‌ಎಸ್‌ಆರ್ ಲೇಔಟ್‌ನ ಸಿಂಥೆಟಿಕ್ ಕಂಪನಿಯಲ್ಲಿ ಕೆಲಸ ಕೊಡಿಸುತ್ತಾನೆ ಎಂದು ವೀರೇಶ್‌ನ ಮೊಬೈಲ್ ಸಂಖ್ಯೆ ನೀಡಿದ್ದಾನೆ. ಆಫರ್ ಲೆಟರ್ ಬರುವ ಮುನ್ನ ಅರ್ಧದಷ್ಟು ಹಣ ಕೊಡಬೇಕು ಎಂದಿದ್ದಾನೆ. ಅದರಂತೆ ಯುವತಿ ಕಲಂದರ್‌ಗೆ 1.20 ಲಕ್ಷ ರೂ. ನೀಡಿದ್ದಾರೆ. ಬಳಿಕ ಆಕೆಗೆ ಸಿಂಥೆಟಿಕ್ ಕಂಪನಿಯ ಆಫರ್ ಲೆಟರ್ ಇ-ಮೇಲ್ ಮೂಲಕ ಬಂದಿದೆ. ಬಳಿಕ ಕಲಂದರ್ ಬಾಕಿ ಹಣ 1.20 ಲಕ್ಷ ಪಡೆದಿದ್ದಾನೆ.
ಹಣ ಕೊಟ್ಟ ಬಳಿಕ ಸಿಂಥೆಟಿಕ್ ಕಂಪನಿಯ ವೀರೇಶ್ ಮತ್ತೆ ಹಣಕ್ಕೆ ಬೇಡಿಕೆ ಇರಿಸಿದ್ದಾನೆ. ಯುವತಿ ಹಣವಿಲ್ಲ ಎಂದಿದ್ದಾರೆ. ಕೆಲಸ ಸಿಗದೆ ಗೊಂದಲಕ್ಕೆ ಒಳಗಾದ ಆಕೆ ಹಣ ವಾಪಸ್ ನೀಡುವಂತೆ ಕಲಂದರ್‌ನನ್ನು ಕೇಳಿದಾಗ ಬೆದರಿಕೆ ಹಾಕಿದ್ದಾನೆ. ಆರೋಪಿಗಳು ಇದೇ ರೀತಿ ಎಂಟು ಉದ್ಯೋಕಾಂಕ್ಷಿಗಳಿಂದ ಸುಮಾರು 14 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.