ಮುಂಬೈ: ಮಾಜಿ ನಾಯಕ ರೋಹಿತ್ ಶರ್ಮ ಮತ್ತು ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್ 9 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ಸತತ 4 ಸೋಲುಗಳ ನಂತರ ಚೆನ್ನೈ ವಿರುದ್ಧ ಮೊದಲ ಗೆಲುವು ದಾಖಲಿಸಿದೆ.
ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 176 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತದ ಮುಂಬೈ ಇಂಡಿಯನ್ಸ್ 15.4 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 8 ಪಂದ್ಯಗಳಲ್ಲಿ ತಲಾ 4 ಜಯ ಹಾಗೂ ಸೋಲಿನೊಂದಿಗೆ 8 ಅಂಕ ಸಂಪಾದಿಸಿ 6ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 8 ಪಂದ್ಯಗಳಿಂದ 2 ಜಯ ಹಾಗೂ 6ನೇ ಸೋಲಿನೊಂದಿಗೆ 4 ಅಂಕದೊಂದಿಗೆ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿತು.
ರೋಹಿತ್ ಶರ್ಮ ಮತ್ತು ರಿಯಾನ್ ರಿಕೆಲ್ಟನ್ (24) ಮೊದಲ ವಿಕೆಟ್ ಗೆ 63 ರನ್ ಜೊತೆಯಾಟ ನಿಭಾಯಿಸಿದರು. ರೋಹಿತ್ ಶರ್ಮ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಅರ್ಧಶತಕ ಬಾರಿಸಿದ್ದೂ ಅಲ್ಲದೇ ಔಟಾಗದೇ ಉಳಿದರು. ರೋಹಿತ್ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ನೊಂದಿಗೆ 76 ರನ್ ಸಿಡಿಸಿ ಅಜೇಯರಾಗಿ ಉಳಿದರೆ, ಸೂರ್ಯಕುಮಾರ್ ಯಾದವ್ 30 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಸೇರಿದಂತೆ 68 ರನ್ ಬಾರಿಸಿ ಔಟಾಗದೇ ಉಳಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರವೀಂದ್ರ ಜಡೇಜಾ ಮತ್ತು ಶಿವಂ ದುಬೆ ಅರ್ಧಶತಕಗಳ ನೆರವಿನಿಂದ ಕಳಪೆ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಯಿತು.
ಒಂದು ಹಂತದಲ್ಲಿ ಸಿಎಸ್ ಕೆ 63 ರನ್ ಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಶಿವಂ ದುಬೆ ಮತ್ತು ಜಡೇಜಾ 4ನೇ ವಿಕೆಟ್ ಗೆ 79 ರನ್ ಜೊತೆಯಾಟ ನಿಭಾಯಿಸಿದರು. ದುಬೆ 32 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 50 ರನ್ ಬಾರಿಸಿ ಔಟಾದರೆ, ಜಡೇಜಾ 35 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 53 ರನ್ ಬಾರಿಸಿ ಔಟಾಗದೇ ಉಳಿದರೆ, ಧೋನಿ (4) ಮತ್ತೆ ವಿಫಲರಾದರು.