ಮೊಹಾಲಿ: ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿನಲ್ಲಿ ಅನುಭವಿಸಿದ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡಿದೆ.
ಮೊಹಾಕಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ರನ್ ಚೇಸ್ ಮಾಡಲು ನಿರ್ಧರಿಸಿದ ಆರ್ ಸಿಬಿ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 157 ರನ್ ಗೆ ಪಂಜಾಬ್ ಕಿಂಗ್ಸ್ ತಂಡವನ್ನು ಕಟ್ಟಿ ಹಾಕಿತು. ಸುಲಭ ಗುರಿ ಬೆಂಬತ್ತಿದ ಆರ್ ಸಿಬಿ 18.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆಯಷ್ಟೇ ನಡೆದ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿದ್ದ ಆರ್ ಸಿಬಿಗೆ ಈ ಪಂದ್ಯ ಸೇಡು ತೀರಿಸಿಕೊಂಡಿತು. ಈ ಗೆಲುವಿನೊಂದಿಗೆ ಆರ್ ಸಿಬಿ 8 ಪಂದ್ಯಗಳಿಂದ 5 ಜಯ ಹಾಗೂ 3 ಸೋಲಿನೊಂದಿಗೆ 10 ಅಂಕದೊಂದಿಗೆ 3ನೇ ಸ್ಥಾನಕ್ಕೆ ಜಿಗಿದರೆ ಪಂಜಾಬ್ ತಂಡ ಇಷ್ಟೇ ಅಂಕ ಗಳಿಸಿದರೂ ರನ್ ಸರಾಸರಿಯಲ್ಲಿ ಹಿಂದೆ ಬಿದ್ದು 4ನೇ ಸ್ಥಾನಕ್ಕೆ ಜಾರಿತು.
ಆರ್ ಸಿಬಿ ತಂಡ ಆರಂಭದಲ್ಲೇ ಫಿಲ್ ಸಾಲ್ಟ್ (1) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಕಳೆದ ಪಂದ್ಯದಲ್ಲಿ ಕೈಬಿಡಲಾಗಿದ್ದ ಬೆಂಗಳೂರಿನ ಹುಡುಗ ದೇವದತ್ ಪಡಿಕಲ್ ಮತ್ತು ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ 2ನೇ ವಿಕೆಟ್ ಗೆ 103 ರನ್ ಜೊತೆಯಾಟದಿಂದ ತಂಡದ ಗೆಲುವು ಖಚಿತಪಡಿಸಿದರು.
ದೇವದತ್ ಪಡಿಕಲ್ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 61 ರನ್ ಬಾರಿಸಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾದರು. ರಜತ್ ಪಟಿದಾರ್ (12) ಆತುರದಲ್ಲಿ ವಿಕೆಟ್ ಒಪ್ಪಿಸಿದರು.
ಆದರೆ ಒಂದೆಡೆ ಬಂಡೆಯಂತೆ ನಿಂತ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 73 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಮೂಲಕ ಚೇಸಿಂಗ್ ಮಾಸ್ಟರ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರು. ಕೊಹ್ಲಿಗೆ ಇದು ಪ್ರಸಕ್ತ ಐಪಿಎಲ್ ನಲ್ಲಿ 4ನೇ ಅರ್ಧಶತಕವಾಗಿದ್ದು, ಒಟ್ಟಾರೆ ಐಪಿಎಲ್ ನಲ್ಲಿ 67ನೇ ಅರ್ಧಶತಕವಾಗಿದೆ.
ಪಂಜಾಬ್ ಗೆ ಕಡಿವಾಣ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಗಳ ಮಾರಕ ದಾಳಿಯಿಂದ ರನ್ ಗಳಿಸಲು ಪರದಾಡಿ ಸಾಧಾರಣ ಮೊತ್ತಕ್ಕೆ ಕುಸಿಯಿತು.
ಪಂಜಾಬ್ ತಂಡಕ್ಕೆ ಪ್ರಿಯಾಂಶ್ ಆರ್ಯ ಮತ್ತು ಪ್ರಭು ಸಿಮ್ರಾನ್ ಸಿಂಗ್ ಮೊದಲ ವಿಕೆಟ್ ಗೆ 4 ಓವರ್ ಗಳಲ್ಲಿ 42 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಆದರೆ ಸ್ಪಿನ್ನರ್ ಕೃನಾಲ್ ಪಾಂಡ್ಯ ಅಖಾಡಕ್ಕೆ ಇಳಿಯುತ್ತಿದ್ಧಂತೆ ನಾಟಕೀಯ ಕುಸಿತಕ್ಕೆ ಒಳಗಾಯಿತು.
ಪ್ರಿಯಾಂಶ್ ಆರ್ಯ (22 ರನ್, 15 ಎಸೆತ, 3 ಬೌಂಡರಿ, 1 ಸಿಕ್ಸರ್) ಪ್ರಭು ಸಿಮ್ರಾನ್ ಸಿಂಗ್ (33 ರನ್, 17 ಎಸೆತ, 5 ಬೌಂಡರಿ, 1 ಸಿಕ್ಸರ್) ಇಬ್ಬರೂ ಕೃನಾಲ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ (6) ಮೊದಲ ಬಾರಿ ಅಖಾಡಕ್ಕೆ ಇಳಿದ ರೊಮಾರಿಯೊ ರುದಫೋರ್ಡ್ ಗೆ ಬಲಿಯಾಗಿ ನಿರಾಸೆ ಮೂಡಿಸಿದರು.
ಈ ಹಂತದಲ್ಲಿ ಪಂಜಾಬ್ 76 ರನ್ ಗೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಜೋಸ್ ಇಂಗ್ಲೀಸ್ 29 ರನ್ ಬಾರಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ ಸುಯೇಶ್ ಶರ್ಮ ಎಸೆತದಲ್ಲಿ ಬೌಲ್ಡ್ ಆದರು. ನೆಹಲ್ ರನೌಟ್ ಆದರು. ಆಗ ತಂಡದ ಮೊತ್ತ 114 ರನ್ ಗೆ 6 ವಿಕೆಟ್ ಆಗಿತ್ತು.
ಶಶಾಂಕ್ ಸಿಂಗ್ 33 ಎಸೆತಗಳಲ್ಲಿ 1 ಬೌಂಡರಿ ಸೇರಿದ 31 ರನ್ ಗಳಿಸಿದರೆ, ಮಾರ್ಕೊ ಜೆನ್ಸನ್ 20 ಎಸೆತಗಳಲ್ಲಿ 2 ಸಿಕ್ಸರ್ ಸೇರಿದಂತೆ 25 ರನ್ ಗಳಿಸಿದರು. ಅಲ್ಲದೇ ಮುರಿಯದ 7ನೇ ವಿಕೆಟ್ ಗೆ 43 ರನ್ ಜೊತೆಯಾಟದಿಂದ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಆರ್ ಸಿಬಿ ಪರ ಕೃನಾಲ್ ಪಾಂಡ್ಯ ಮತ್ತು ಸುಯೇಶ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ರೊಮಾರಿಯೊ ಶೆಫರ್ಡ್ 1 ವಿಕೆಟ್ ಗಳಿಸಿದರು. ಭುವನೇಶ್ವರ್ ಕುಮಾರ್ ಮತ್ತು ಹಾಜ್ಲೆವುಡ್ ವಿಕೆಟ್ ಪಡೆಯದೇ ಇದ್ದರೂ ಮಿತವ್ಯಯಿಗಳಾಗಿ ಗಮನ ಸೆಳೆದರು.