ಲಕ್ನೊ: ಪತ್ನಿ ಕುಟುಂಬದವರು ಸುಳ್ಳು ಕೇಸ್ ಹಾಕಿ ಕಿರುಕುಳ ನೀಡುತ್ತಾರೆ ಎಂದು ವೀಡಿಯೋದಲ್ಲಿ ಆರೋಪಿಸಿ ಉತ್ತರ ಪ್ರದೇಶದಲ್ಲಿ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಎಟ್ವಾಹ್ ನಲ್ಲಿ ಇಂಜಿನಿಯರ್ ಮೋಹಿತ್ ಯಾದವ್ ಆತ್ಮಹತ್ಯೆಗೂ ಮುನ್ನ ವೀಡಿಯೋದಲ್ಲಿ ಪತ್ನಿ ಹಾಗೂ ಅವರ ಭಾಮೈದಿಂದರು ಸುಳ್ಳು ಕೇಸುಗಳನ್ನು ದಾಖಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಸಾವಿಗೆ ನ್ಯಾಯ ದೊರಕಿಸಿಕೊಡಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಒಂದು ವೇಳೆ ನನ್ನ ಸಾವಿಗೆ ನ್ಯಾಯ ದೊರಕಿಸಿಕೊಡಲು ಆಗದೇ ಇದ್ದರೆ ಚಿತಾಭಸ್ಮವನ್ನು ಚರಂಡಿಗೆ ಹಾಕಿ ಎಂದು ಆಗ್ರಹಿಸಿದ್ದಾರೆ.
ಔರಾಯಿಯಾ ಜಿಲ್ಲೆಯಲ್ಲಿ ಸೀಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೋಹಿತ್ ಯಾದವ್ 7 ವರ್ಷಗಳ ಕಾಲ ಪ್ರೀತಿಸಿ ಪ್ರಿಯಾ ಎಂಬಾಕೆಯನ್ನು 2023ರಲ್ಲಿ ಮದುವೆ ಆಗಿದ್ದ.
ಪ್ರಿಯಾ ಎರಡು ತಿಂಗಳ ಹಿಂದೆ ಅಧ್ಯಾಪಕಿಯಾಗಿ ಬಿಹಾರದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿದ್ದು, ಗರ್ಭಿಣಿ ಆಗಿದ್ದ ಪ್ರಿಯಾಳಿಗೆ ಆಕೆಯ ಕುಟುಂಬದವರು ಗರ್ಭಪಾತ ಮಾಡಿಸಿದ್ದರು. ಅಲ್ಲದೇ ಆಕೆಯ ಆಭರಣಗಳನ್ನು ಅತ್ತೆ ತೆಗೆದಿರಿಸಿಕೊಂಡಿದ್ದರು.
ಮದುವೆ ವೇಳೆ ಯಾವುದೇ ವರದಕ್ಷಿಣೆ ಪಡೆದಿರಲಿಲ್ಲ. ಆದರೆ ಪತ್ನಿ ವರದಕ್ಷಿಣೆ ಕಿರುಕುಳದ ದೂರು ನೀಡಿ ನಿನ್ನ ಎಲ್ಲಾ ಕುಟುಂಬದವರನ್ನು ಜೈಲಿಗೆ ಹಾಕಿಸುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ವೀಡಿಯೋದಲ್ಲಿ ಮೋಹಿತ್ ಅರೋಪಿಸಿದ್ದಾರೆ.
ತನ್ನ ಮನೆಯವರ ಕ್ಷಮೆಯಾಚಿಸಿರುವ ಮೋಹಿತ್, ನನ್ನ ಸಾವಿಗೆ ನ್ಯಾಯ ಸಿಗದೇ ಇದ್ದರೆ ನನ್ನ ಅಸ್ಥಿಯನ್ನು ಚರಂಡಿಗೆ ಎಸೆಯಿರಿ ಎಂದು ಆಗ್ರಹಿಸಿದ್ದಾರೆ.
ಈ ವೀಡೀಯೊ ನಿಮಗೆ ಸಿಗುವಷ್ಟರಲ್ಲಿ ನಾನು ಈ ಲೋಕವನ್ನು ತ್ಯಜಿಸಿರುತ್ತೇನೆ. ಪುರುಷರಿಗೆ ಯಾವುದೇ ಕಾನೂನು ಇಲ್ಲದ ಜಗತ್ತಿನಲ್ಲಿ ನಾನು ಇರಲು ಬಯಸುವುದಿಲ್ಲ. ನನ್ನ ಪತ್ನಿ ಹಾಗೂ ಅವರ ಕುಟುಂಬದವರ ಕಾಟ ತಡೆಯಲು ಆಗುತ್ತಿಲ್ಲ ಎಂದು ಅವರು ವಿವರಿಸಿದ್ದಾರೆ.
ಕೋಟಾಗೆ ಹೋಗಬೇಕಿದ್ದ ಮೋಹಿತ್ ಕೊನೆಯ ಕ್ಷಣದಲ್ಲಿ ಎಟ್ವಾವ್ ನಲ್ಲಿ ಉಳಿದುಕೊಂಡಿದ್ದು, ಘಟನೆಯ ಬಗ್ಗೆ ಪತ್ನಿ ಹಾಗೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.