ಬಾಂಗ್ಲಾದೇಶದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ರೆಡ್ ನೋಟೀಸ್ ನೀಡುವಂತೆ ಇಂಟರ್ಪೋಲ್ಗೆ ಮನವಿ ಮಾಡಲಾಗಿದೆ.
ಬಾಂಗ್ಲಾದೇಶ ಪೊಲೀಸ್ನ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಈ ಮನವಿ ಸಲ್ಲಿಸಿದೆ ಎಂದು ಬಾಂಗ್ಲಾದೇಶದ ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.
ಹಸೀನಾ ಬಾಂಗ್ಲಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಾಗಿನಿಂದ ಅಲ್ಲಿನ ಹಂಗಾಮಿ ಸರ್ಕಾರವು ಮಾಜಿ ಪ್ರಧಾನಿಯನ್ನು ವಶಕ್ಕೆ ಒಪ್ಪಿಸುವಂತೆ ಭಾರತದ ಮೇಲೆ ಒತ್ತಡ ಹೇರುತ್ತಿದೆ. ಬಾಂಗ್ಲಾದಲ್ಲಿ ಹಸೀನಾ ವಿರುದ್ಧ ಹಲವು ಪ್ರಕರಣಗಳಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಹೇಳಿದೆ.
ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನುಸ್ ನೇತೃತ್ವದಲ್ಲಿ ಬಾಂಗ್ಲಾದಲ್ಲಿ ಹಂಗಾಮಿ ಸರ್ಕಾರ ಅಸ್ತಿತ್ವದಲ್ಲಿದೆ. ಈ ಸರ್ಕಾರವನ್ನು ಬೀಳಿಸಲು ಹಸೀನಾ ಪಿತೂರಿ ನಡೆಸುತ್ತಿದ್ಧಾರೆ ಎನ್ನುವ ಆರೋಪವೂ ಕೇಳಿಬರುತ್ತಿದೆ. ಈಗ ಅವರಿಗೆ ರೆಡ್ ಕಾರ್ನರ್ ನೋಟೀಸ್ ನೀಡುವಂತೆ ಇಂಟರ್ಪೋಲ್ಗೆ ಮನವಿ ಸಲ್ಲಿಕೆಯಾಗಿದೆ.
ಬಾಂಗ್ಲಾದೇಶದ ಕೋರ್ಟ್ಗಳು, ತನಿಖಾ ಸಂಸ್ಥೆಗಳಿಂದ ಮನವಿ ಬಂದಾಗ ನ್ಯಾಷನಲ್ ಸೆಂಟ್ರಲ್ ಬ್ಯೂರೋ ಇಂಟರ್ಪೋಲ್ಗೆ ಈ ರೀತಿಯ ಮನವಿ ಮಾಡುತ್ತದೆ. ವಿವಿಧ ಪ್ರಕರಣಗಳಲ್ಲಿ ನಡೆಯುತ್ತಿರುವ ತನಿಖೆ ವೇಳೆ ಕೇಳಿ ಬಂದ ಆರೋಪಗಳ ಸಂಬಂಧ ಈ ಮನವಿಗಳನ್ನು ಮಾಡಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ದೇಶಭ್ರಷ್ಟ ಶೇಖ್ ಹಸೀನಾ ಹಾಗೂ ಇತರರನ್ನು ಬಂಧಿಸಲು ಇಂಟರ್ಪೋಲ್ನ ನೆರವು ಪಡೆಯುವಂತೆ ಕಳೆದ ನವೆಂಬರ್ ತಿಂಗಳಲ್ಲೇ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಮುಖ್ಯ ಪ್ರಾಸಿಕ್ಯೂಟರ್ ಕಚೇರಿಯು ಬಾಂಗ್ಲಾದ ಪೊಲೀಸ್ಗೆ ತಿಳಿಸಿತ್ತು.
ಬಾಂಗ್ಲಾದೇಶದಲ್ಲಿ ಹಲವು ವರ್ಷಗಳಿಂದ ಪ್ರಧಾನಿಯಾಗಿದ್ದ ಶೇಖ್ ಹಸೀನಾ 2024ರಲ್ಲಿ ಬೃಹತ್ ವಿದ್ಯಾರ್ಥಿ ಪ್ರತಿಭಟನೆ ಕಾರಣ ಭಾರತಕ್ಕೆ ತಪ್ಪಿಸಿಕೊಂಡು ಬಂದಿದ್ದರು.