Menu

ಮೈಸೂರಿನಲ್ಲಿ ಕೋ ಆಪರೇಟಿವ್ ಬ್ಯಾಂಕ್‌ನಿಂದ 1.41 ಕೋಟಿ ರೂ. ವಂಚನೆ: ಮಹಿಳೆ ದೂರು

ಮೈಸೂರಿನ ನವನಗರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ತನಗೆ 1.41 ಕೋಟಿ ರೂ. ವಂಚನೆ ಮಾಡಿರುವುದಾಗಿ ಗ್ರಾಹಕಿಯೊಬ್ಬರು ಆರೋಪಿಸಿದ್ದಾರೆ. ತನ್ನ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ 1 ಕೋಟಿ 41 ಲಕ್ಷ ರೂಪಾಯಿಗಳನ್ನು ನನ್ನ ಅನುಮತಿಯಿಲ್ಲದೆ ಬ್ಯಾಂಕಿನ 2 ಅನ್ಯ ಖಾತೆಗೆ ಟ್ರಾನ್ಸಫರ್ ಮಾಡಿಕೊಳ್ಳ ಲಾಗಿದೆ ಎಂದು ಸುನಿತಾ ಎಂಬವರು ಆರೋಪಿಸಿದ್ದಾರೆ.

ಸಾಲಕ್ಕಾಗಿ ಬ್ಯಾಂಕ್‌ಗೆ ನೀಡಿದ್ದ ಚೆಕ್‌ಗಳನ್ನು ಬಳಸಿ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಬ್ಯಾಂಕ್‌ನ ಅಧ್ಯಕ್ಷ ಕೆ.ಎನ್.ಬಸಂತ್, ಜನರಲ್ ಮ್ಯಾನೇಜರ್ ಸುರೇಶ್, ಮ್ಯಾನೇಜರ್ ಶಿವಕುಮಾರ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷರನ್ನು ವಿಚಾರಿಸಿದಾಗ ಬ್ಯಾಂಕ್‌ನ ಹಿತದೃಷ್ಟಿಯಿಂದ ಹಣ ಬಳಸಿದ್ದೇವೆಂದು 4 ವರ್ಷಗಳಿಂದ ಸಬೂಬು ಹೇಳುತ್ತಾ ಬಂದಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ ಮ್ಯಾನೇಜರ್ ಶಿವಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.

ಬಳಸಿಕೊಂಡ ಹಣಕ್ಕೆ ಬಡ್ಡಿ ಸಹಿತ ವಾಪಸ್ ಕೊಡಿಸುವುದಾಗಿ ಅಧ್ಯಕ್ಷ ಕೆ.ಎನ್. ಬಸಂತ್ ಭರವಸೆ ನೀಡಿದ್ದರು. ಈವರೆಗೆ 25 ಲಕ್ಷ ರೂ. ಮಾತ್ರ ನನ್ನ ಖಾತೆಗೆ ಜಮೆ ಆಗಿದ್ದು, ಇನ್ನೂ 1 ಕೋಟಿ 16 ಲಕ್ಷ ರೂ. ಕೊಡದೆ ಸತಾಯಿಸುತ್ತಿದ್ದಾರೆ ಎಂದು ಸುನಿತಾ ಆರೋಪಿಸಿದ್ದಾರೆ. ತಮ್ಮ ಬಾಕಿ ಹಣವನ್ನು ವಾಪಸ್ ನೀಡದೆ ಇರುವುದಕ್ಕೆ ಬ್ಯಾಂಕ್‌ನ ಅಧ್ಯಕ್ಷ, ಜನರಲ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ವಿರುದ್ಧ ಸುನಿತಾ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *