Menu

ತವರಿನಲ್ಲಿ ಆರ್ ಸಿಬಿಗೆ ಹ್ಯಾಟ್ರಿಕ್ ಸೋಲು; ಗೆದ್ದು 2ನೇ ಸ್ಥಾನಕ್ಕೆ ಜಿಗಿದ ಪಂಜಾಬ್

rcb vs pbks

ಬೆಂಗಳೂರು: ಆಲ್ ರೌಂಡರ್ ಟಿಮ್ ಡೇವಿಡ್ ಹೋರಾಟದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 5 ಸೋಲನುಭವಿಸುವ ಮೂಲಕ ತವರಿನಲ್ಲಿ ಆಡಿದ ಐಪಿಎಲ್ ಟಿ-20 ಟೂರ್ನಿಯ ಮೂರು ಪಂದ್ಯಗಳಲ್ಲೂ ಸೋತು ಹ್ಯಾಟ್ರಿಕ್ ಸೋಲು ಕಂಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯ ಮಳೆಯಿಂದಾಗಿ 14 ಓವರ್ ಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ ಹೊಡಿಬಡಿ ಆಟಕ್ಕೆ ಮುಂದಾಗಿ 9 ವಿಕೆಟ್ ಗೆ 95 ರನ್ ಕಲೆಹಾಕಿತು. ಸುಲಭ ಗುರಿ ಬೆಂಬತ್ತಿದ ಪಂಜಾಬ್ ಕಿಂಗ್ಸ್ 12.1 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.

ಪಂಜಾಬ್ ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಆರ್ ಸಿಬಿ ಈ ಸೋಲಿನೊಂದಿಗೆ 4ನೇ ಸ್ಥಾನದಲ್ಲಿ ಉಳಿದುಕೊಂಡಿತು. ಆರ್ ಸಿಬಿ ಗೆದ್ದ 4 ಪಂದ್ಯಗಳು ತವರಿನ ಹೊರಗೆ ಆಗಿದ್ದು, ಈ ಋತುವಿನಲ್ಲಿ ತವರಿನಲ್ಲಿ ಆಡಿದ ಒಂದೂ ಪಂದ್ಯ ಗೆಲ್ಲಲು ಆಗದೇ ಇರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಅದರಲ್ಲೂ ಈ ಪಂದ್ಯ ಮಳೆ ಸೋಲಿನ ಮೇಲೆ ಬರೆ ಎಳೆಯಿತು. ಅದಕ್ಕೆ ತಕ್ಕಂತೆ ಟಾಸ್ ಸೋತಿದ್ದು ಕೂಡ ದುಬಾರಿ ಆಯಿತು.

ಪಂಜಾಬ್ ಪರ ನೆಹಲ್ ವಧೇರ (33 ರನ್), ಜೋಸ್ ಇಂಗ್ಲೀಸ್ (14), ಪ್ರಿಯಾಂಶ್ ಆರ್ಯ (16) ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು, ಆರ್ ಸಿಬಿ ಪರ ಜೋಶ್ ಹಾಜ್ಲೆವುಡ್ 3 ಮತ್ತು ಭುವನೇಶ್ವರ್ ಕುಮಾ್ 2 ವಿಕೆಟ್ ಗಳಿಸಿ ಹೋರಾಟ ನಡೆಸಿದ್ದು ಫಲ ನೀಡಲಿಲ್ಲ.

ಕುಸಿದ ಆರ್ ಸಿಬಿ

ಮಳೆಯಿಂದ ತೇವಗೊಂಡಿದ್ದ ಪಿಚ್ ನಲ್ಲಿ ರನ್ ಗಳಿಸಲು ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಪರದಾಡಿದರು. ಒಂದು ಹಂತದಲ್ಲಿ ಆರ್ ಸಿಬಿ 33 ರನ್ ಗೆ 5 ವಿಕೆಟ್ ಕಳೆದುಕೊಂಡರೆ ನಂತರ 63 ರನ್ ಗೆ 9 ವಿಕೆಟ್ ಕಳೆದುಕೊಂಡಿತ್ತು. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗಮನ ಸೆಳೆದ ಸಾಲ್ಟ್ (4), ವಿರಾಟ್ ಕೊಹ್ಲಿ (1), ಲಿಯಾಮ್ ಲಿವಿಂಗ್ ಸ್ಟನ್ (4), ಜಿತೇಶ್ ಕುಮಾರ್ (2), ಕೃನಾಲ್ ಪಾಂಡ್ಯ (1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ನಾಯಕ ರಜತ್ ಪಟಿದಾರ್ 18 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 23 ರನ್ ಬಾರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಲು ಯತ್ನಿಸಿ ವಿಫಲರಾದರು.
ಕೊನೆಯ ಓವರ್ ನಲ್ಲಿ ಟಿಮ್ ಡೇವಿಡ್ ಸತತ 3 ಸಿಕ್ಸರ್ ಸಿಡಿಸಿದರು. ಅದೃಷ್ಟಕ್ಕೆ ಕೊನೆಯ ಎಸೆತ ನೋಬಾಲ್ ಆಗಿದ್ದರಿಂದ ಹೆಚ್ಚುವರಿಯಾಗಿ ಸಿಕ್ಕಿದ ಒಂದು ಎಸೆತದಲ್ಲಿ 2 ರನ್ ಬಾರಿಸಿದ ಟಿಮ್ ಡೇವಿಡ್ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಸೇರಿ ಅರ್ಧಶತಕ ಪೂರೈಸಿದರು. ಇದು ಟಿಮ್ ಡೇವಿಡ್ ಪಾಲಿಗೆ ಮೊದಲ ಐಪಿಎಲ್ ಅರ್ಧಶತಕವಾಗಿದೆ.

ಪಂಜಾಬ್ ಪರ ಅರ್ಷದೀಪ್ ಸಿಂಗ್ ಮಾರ್ಕೊ ಜೆನ್ಸನ್, ಯಜುರ್ವೆಂದ್ರ ಚಾಹಲ್, ಹರ್ಷದೀಪ್ ಬ್ರಾರ್ ತಲಾ 2 ವಿಕೆಟ್ ಪಡೆದು ಮಿಂಚಿದರು.

Related Posts

Leave a Reply

Your email address will not be published. Required fields are marked *