ಬರ್ನಾಪುರ್: 17 ವರ್ಷದ ಯುವತಿಯೊಬ್ಬಳು ಪತಿಯನ್ನು ಒಡೆದ ಬಿಯರ್ ಬಾಟಲಿಯಲ್ಲಿ 36 ಬಾರಿ ಇರಿದು ಕೊಂದಿದ್ದೂ ಅಲ್ಲದೇ ವೀಡಿಯೋ ಕಾಲ್ ಮಾಡಿ ಪ್ರಿಯಕರಿಗೆ ಶವ ತೋರಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬರ್ನಾಪುರ್ ಜಿಲ್ಲೆಯ ಇಂಧೋರ್-ಇಂಚಾರ್ ಪುರ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಐಟಿಐ ಕಾಲೇಜು ಬಳಿ 25 ವರ್ಷದ ಗೋಲ್ಡನ್ ಪಾಂಡೆ ಅಲಿಯಾಸ್ ರಾಹುಲ್ ಹತ್ಯೆ ಆಗಿದೆ.
ಅಪ್ರಾಪ್ತ ಯುವತಿ, ಆಕೆಯ ಪ್ರಿಯಕರ ಯುವರಾಜ್ ಹಾಗೂ ಈತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದು, ಒಬ್ಬ ಆರೋಪಿ ಕೂಡ ಅಪ್ರಾಪ್ತ ಎಂದು ಪೊಲೀಸರು ತಿಳಿಸಿದ್ದು, ಬಂಧಿತರಿಂದ ವಿಚಾರಣೆ ನಡೆದಿ ದೆ,
ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ದಂಪತಿ ದ್ವಿಚಕ್ರವಾಹನದಲ್ಲಿ ತೆರಳಿದ್ದು, ಶಾಪಿಂಗ್ ಮುಗಿಸಿ ರೆಸ್ಟೋರೆಂಟ್ ನಲ್ಲಿ ಊಟ ಮಾಡಿ ಮನೆಗೆ ಮರಳುತ್ತಿದ್ದರು. ಈ ವೇಳೆ ಚಪ್ಪಲಿ ಬಿತ್ತು ಎಂದು ಹೇಳಿದ ಪತ್ನಿ ಬೈಕ್ ನಿಲ್ಲಿಸಿ ಚಪ್ಪಲಿ ತೆಗೆದುಕೊಂಡು ಬರಲು ಹೇಳಿದ್ದಾಳೆ.
ರಾಹುಲ್ ವಾಹನ ನಿಲ್ಲಿಸಿ ಚಪ್ಪಲಿ ತೆಗೆದುಕೊಂಡು ಹೋಗುತ್ತಿದ್ದಂತೆ ಅಲ್ಲಿಯೇ ಕಾದು ನಿಂತಿದ್ದ ಯುವರಾಜ್ ನ ಇಬ್ಬರು ಸಹಚರರು ಹಾಗೂ ಪತ್ನಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ರಸ್ತೆಯಲ್ಲಿ ಎಳೆದಾಡಿದ್ದೂ ಅಲ್ಲದೇ ಒಡೆದ ಬಾಟಲಿ ಚೂರಿನಿಂದ 36 ಬಾರಿ ಇರಿದು ಕೊಂದಿದ್ದಾರೆ.
ಈ ಕ್ರೌರ್ಯ ಅಲ್ಲಿಗೆ ಮುಗಿಯದೇ ಪತ್ನಿ ಪ್ರಿಯಕರ ಯುವರಾಜ್ ಗೆ ವೀಡಿಯೋ ಕಾಲ್ ಮಾಡಿ ಪತಿಯ ಶವವನ್ನು ತೋರಿಸಿದ್ದಾಳೆ. ನಂತರ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಏಪ್ರಿಲ್ 13 ಭಾನುವಾರ ಬೆಳಿಗ್ಗೆ ಪತ್ತೆಯಾದ ಅಪರಿಚಿತ ಶವವನ್ನು ರಾಹುಲ್ ಕುಟುಂಬದವರು ಗುರುತಿಸಿದ್ದಾರೆ. ರಾಹುಲ್ ಗೆ ಇತ್ತೀಚೆಗಷ್ಟೇ ಮದುವೆ ಆಗಿದ್ದು, ಕೊನೆಯ ಬಾರಿಗೆ ಪತ್ನಿ ಜೊತೆ ಹೊರಗೆ ಹೋಗಿದ್ದನ್ನು ನೋಡಿದ್ದಾಗಿ ಹೇಳಿದ್ದಾರೆ.
ಪತ್ನಿ ನಾಪತ್ತೆಯಾಗಿದ್ದು, ತನಿಖೆ ಮುಂದುವರಿಸಿದಾಗ ಕೊಲೆ ಮಾಡಿದ ಯುವರಾಜ್ ನ ಸಹಚರ ಲಲಿತ್ ಪಾಟೀಲ್ ಇಟಾರ್ಸಿ ನಗರಕ್ಕೆ ವಲಸೆ ಹೋಗಿದ್ದು, ನಂತರ ಉಜ್ಜಯಿನಿಗೆ ಹೋಗಿದ್ದಾನೆ. ಒಬ್ಬರ ನಂತರ ಒಬ್ಬರ ಮಾಹಿತಿ ಸಂಗ್ರಹಿಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.