ಹಾಲು, ಮೊಸರು, ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಮಾಡುತ್ತಿರುವ ಜನಾಕ್ರೋಶ ಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಜನರಿಗೆ ಆಕ್ರೋಶ ಇಲ್ಲ, ಬಿಜೆಪಿಗೆ ಮಾತ್ರ ಆಕ್ರೋಶ ಇದೆ ಎಂದು ಕೈ ನಾಯಕರು ಕುಟುಕಿದ್ದಾರೆ.
ಇಂದಿನ ಬೆಲೆ ಏರಿಕೆಗೆ ಕೇಂದ್ರದ ನೀತಿಯೇ ಕಾರಣ ಎಂದು ಕಾಂಗ್ರೆಸ್ ಹೇಳಿದ್ದು, ಸಿಲಿಂಡರ್ ದರ ಏರಿಕೆ ಖಂಡಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೇರಿ ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಹರಿ ಹಾಯ್ದಿದ್ದಾರೆ.
ಏಪ್ರಿಲ್ 7ರಂದು ಮೈಸೂರಿಂದ ಆರಂಭವಾಗಿರುವ ಬಿಜೆಪಿಯ ಜನಾಕ್ರೋಶ ಯಾತ್ರೆ ಬಾಗಲಕೋಟೆ ತಲುಪಿದೆ. ಬಾಗಲಕೋಟೆಯಲ್ಲಿ ಬಿಜೆಪಿ ನಾಯಕರು ತೆರೆದ ವಾಹನದಲ್ಲಿ ಯಾತ್ರೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ಆಕ್ರೋಶಗೊಂಡು ಬಿಜೆಪಿಯನ್ನು ಮನೆಗೆ ಕಳುಹಿಸಿದ್ದಾರೆ. ನಮ್ಮ ಮೇಲೆ ಜನ ಆಕ್ರೋಶಗೊಂಡಿಲ್ಲ ಎಂದು ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಸೇರಿದ್ದ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಸಕರು, ಸಚಿವರು, ಮಹಿಳಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಭಾಗದಿಂದಲೂ ಕಾರ್ಯಕರ್ತರು ಆಗಮಿಸಿದ್ದರು.