ದಕ್ಷಿಣ ಕನ್ನಡದ ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯದಲ್ಲಿ ಭಾರೀ ಏರಿಕೆಯಾಗಿ 2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ ರೂ. ಆಗಿದೆ.
ಕಳೆದ ವರ್ಷಕ್ಕಿಂತ ಈ ಬಾರಿ 9.94 ಕೋಟಿ ರೂ. ಆದಾಯ ಹೆಚ್ಚಳವಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯಡಿ ಬರುವ ದೇವಸ್ಥಾನ ಇದಾಗಿದ್ದು, ರಾಜ್ಯದ ಶ್ರೀಮಂತ ದೇವಸ್ಥಾನ ಎಂದು ಹೆಸರಾಗಿದೆ. ಶಕ್ತಿ ಯೋಜನೆ ಪರಿಣಾಮ ಕುಕ್ಕೆ ದೇವಸ್ಥಾನದ ಆದಾಯದಲ್ಲಿ ಹೆಚ್ಚಳವಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ವಾರ್ಷಿಕ ಆದಾಯ 146.01 ಕೋಟಿ ಆಗಿತ್ತು.
ರಾಜಕಾರಣಿಗಳು, ಚಿತ್ರರಂಗದ ಗಣ್ಯರು ಸೇರಿದಂತೆ ರಾಜ್ಯದವರಲ್ಲದೇ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸುತ್ತಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆದಾಯ ಗಳಿಕೆಯಲ್ಲಿ ಕಳೆದ ವರ್ಷವೂ ಮೊದಲ ಸ್ಥಾನದಲ್ಲಿತ್ತು.
ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. 2006-07ರಲ್ಲಿ 19.76 ಕೋಟಿ ರೂ. ಆದಾಯ ಬಂದಿತ್ತು. ಇದು 2007-08ರಲ್ಲಿ 24.44 ಕೋಟಿ ರೂ.ಗೆ ಏರಿ ಕರ್ನಾಟಕದ ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಖ್ಯಾತಿ ಪಡೆದಿತ್ತು. ಅಂದಿನಿಂದ ಇಂದಿನವರೆಗೂ ಮೊದಲ ಸ್ಥಾನವನ್ನು ಸ್ಥಿರವಾಗಿ ಉಳಿಸಿಕೊಂಡಿದೆ.