Menu

ಲಾರಿ ಮುಷ್ಕರ ಮೂರನೇ ದಿನಕ್ಕೆ, ಸರಕು ಸಾಗಣೆಯಲ್ಲಿ ವ್ಯತ್ಯಯ

ಡಿಸೇಲ್ ಬೆಲೆ ಹೆಚ್ಚಳ ವಿರೋಧಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಲಾರಿ ಮಾಲೀಕರು ನಡೆಸುತ್ತಿರುವ ಲಾರಿ ಮುಷ್ಕರವು ಮೂರನೇ ದಿನಕ್ಕೆ ಕಾಲಿರಿಸಿದೆ. ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಬೆಲೆ ಏರಿಕೆ ಬಿಸಿ ಕೂಡ ಜನರಿಗೆ ತಟ್ಟಲು ಶುರುವಾಗಿದೆ.

ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಪದಾಧಿಕಾರಿಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಎರಡು ಸುತ್ತಿನ ಸಂಧಾನ ಸಭೆಗಳು ಫಲ ನೀಡಿಲ್ಲ. ಇದರಿಂದಾಗಿ ಲಾರಿ ಮುಷ್ಕರ ಮುಂದುವರಿದಿದೆ.

ಡೀಸೆಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಲಾರಿ ಮಾಲೀಕರು ಕಳೆದ ಏ.14ರ ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ರಾಜ್ಯಾದ್ಯಂತ ಸರಕು ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಂಡಿ ರುವುದರಿಂದ ಹೊರರಾಜ್ಯಗಳಿಂದ  ಸರಕು ಸಾಗಾಣಿಕೆಯ ಲಾರಿಗಳು ಕರ್ನಾಟಕಕ್ಕೆ ಆಗಮಿಸುತ್ತಿಲ್ಲ.

ನಿರಂತರ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಲಾರಿ ಮುಷ್ಕರದಿಂದ ಉಂಟಾಗಿರುವ ಸರಕು ಸಾಗಣೆ ವ್ಯತ್ಯಯದಿಂದ ಸಂಕಷ್ಟ ಹೆಚ್ಚಿದೆ.
ಜಲ್ಲಿ, ಮರಳು, ಕಲ್ಲು, ಸಿಮೆಂಟು, ಕಬ್ಬಿಣ ಮತ್ತಿತರೆ ವಸ್ತುಗಳ ಸಾಗಾಟ ಸ್ಥಗಿತಗೊಂಡಿದೆ. ಹಾಲು, ಔಷಧಿ, ತರಕಾರಿ ಹೊರತುಪಡಿಸಿ ಎಲ್ಲಾ ವಸ್ತುಗಳ ಸಾಗಾಟ ನಿಂತುಹೋಗಿದೆ. ಮಾರುಕಟ್ಟೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಎಲ್ಲೆಡೆ ಲಾರಿಗಳು, ಗೂಡ್ಸ್ ವಾಹನಗಳು ನಿಂತಲ್ಲೇ ನಿಂತಿವೆ.

ಮುಷ್ಕರಕ್ಕೆ  69 ಸಂಘಟನೆಗಳು ಬೆಂಬಲ ನೀಡಿದ್ದು 6 ಲಕ್ಷ ಲಾರಿಗಳು ಸಂಚಾರ ಸ್ತಬ್ಧಗೊಳಿಸಿವೆ ಎಂದು ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ.ಆ‌ರ್.ಷಣ್ಮುಗಪ್ಪ ತಿಳಿಸಿದ್ದಾರೆ.

ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸಿದ್ದರಿಂದ ನಮ್ಮ ಉದ್ಯಮ ತೀವ್ರ ಸಂಕಷ್ಟಕ್ಕೆ ಈಡಾಗಿದೆ. ಕೂಡಲೇ ಡೀಸೆಲ್ ದರ ಇಳಿಸಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು, ಟೋಲ್‌ಗಳಲ್ಲಿ ಪೊಲೀಸರು ಲಾರಿ ಚಾಲಕರಿಗೆ ನೀಡುವ ಕಿರುಕುಳ ತಪ್ಪಿಸಬೇಕು, ವಾಹನ ವಿಮೆಯ ದರ ಕಡಿತಗೊಳಿಸುವುದು, ಎಫ್‌ಸಿ ದರ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತಾದರೂ ಸರ್ಕಾರ ನಮ್ಮ ಮನವಿಯನ್ನು ಪರಿಗಣಿ ಸಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರ ಎಪಿಎಂಸಿ ಸೇರಿದಂತೆ ರಾಜ್ಯದ ಹಲವೆಡೆ ಟ್ರಕ್ ನಿಲ್ದಾಣಗಳಲ್ಲಿ ವಾಹನಗಳು ನಿಂತಿವೆ. ಕೆಲವು ಸರಕು ಸಾಗಾಣಿಕೆ ಲಾರಿ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ದಾವಣಗೆರೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಸರಕು ಸಾಗಣೆ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದ್ದು, ಈಗಾಗಲೇ ಅಗತ್ಯ ವಸ್ತು ಗಳ ಬೆಲೆ ಏರಿಕೆಯಾಗಿದ್ದು ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

Related Posts

Leave a Reply

Your email address will not be published. Required fields are marked *