Menu

ಭಾರತ ಶೂನ್ಯ ಆದಾಯ ತೆರಿಗೆ ದೇಶವಾಗಬಹುದೇ?

ಕೆಲವು ಸೃಜನಶೀಲ ಪರಿಹಾರದ ಮೂಲಕ ಭಾರತದಲ್ಲಿ ಜನರ ಮೇಲೆ ಆಗುತ್ತಿರುವ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದು ಅತೀ ಅವಶ್ಯಕವಾಗಿದೆ. ವಿವಿಧ ವಲಯಗಳಿಗೆ ತೆರಿಗೆಯ ನೆಲೆಗಳನ್ನು ವಿಸ್ತರಿಸುವ ಮೂಲಕ ಹೊರೆಯನ್ನು ಕಡಿಮೆ ಮಾಡಬಹುದು. ಕಾಂಬೋಡಿಯಾದಂತಹ ದೇಶಗಳು ಹೂಡಿಕೆಯ ಮೂಲಕ ಪೌರತ್ವವನ್ನು ನೀಡುತ್ತದೆ. ಭಾರತದಲ್ಲೂ ಈ ವ್ಯವಸ್ಥೆಯನ್ನು ಜಾರಿಗೊಳಿಸಬಹುದು. ವೆಚ್ಚಗಳನ್ನು ನಿರ್ವಹಿಸಲು ಸರಿಯಾದ ಕ್ರಮವನ್ನು ಅನುಸರಿಸಬೇಕು. ದೇಶದಲ್ಲಿ ಉಚಿತ ಯೋಜನೆಗಳನ್ನು ಕಡ್ಡಾಯವಾಗಿ ರದ್ದುಪಡಿಸಬೇಕು. ಏಕೆಂದರೆ ಈ ಉಚಿತ ಯೋಜನೆಗಳಿಗೆ ಬಳಸುವ ಹಣ ತೆರಿಗೆದಾರರ ಜೇಬಿನಿಂದ ಬಂದದಾಗಿರುತ್ತದೆ.

ಪ್ರಪಂಚದ ಏಳನೆಯ ಅತೀ ದೊಡ್ಡ ರಾಷ್ಟ್ರವಾಗಿರುವ ಮತ್ತು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತದಂತಹ ದೊಡ್ಡ ದೇಶದಲ್ಲಿ ಆದಾಯ ತೆರಿಗೆ ಅನ್ನುವುದು ದೊಡ್ಡ ವಿಚಾರವಾಗಿರುತ್ತದೆ. ಇಲ್ಲಿ ಆದಾಯ ತೆರಿಗೆ ಇಲ್ಲದೆ ಭಾರತ ದೇಶವನ್ನು ಊಹಿಸಿಕೊಳ್ಳುವುದು ಸಹ ಅಸಾಧ್ಯ ಎನಿಸುತ್ತದೆ. ಒಟ್ಟಿನಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಆದಾಯ ತೆರಿಗೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಮ್ಮಂತ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಶಿಕ್ಷಣ, ಆರೋಗ್ಯ, ಜನರಿಗೆ ಮೂಲಸೌಕರ್ಯಗಳನ್ನು ಒದಗಿಸುವುದು, ಬಡತನ ರೇಖೆಗಿಂತ ಕೆಳಗಿರುವ ಜನರ ಕಲಾಣ್ಯಕ್ಕಾಗಿ ಹಣ ವಿನಿಯೋಗಿಸಿ ಅವರಿಗೆ ಅಗತ್ಯವಾದ ಆರ್ಥಿಕ ಭದ್ರತೆ ಯನ್ನು ಒದಗಿಸುವುದು ಅತೀ ಮುಖ್ಯವಾಗಿರುತ್ತದೆ. ಹೆಚ್ಚು ಹೆಚ್ಚು ಆದಾಯ ತೆರಿಗೆ ಸಂಗ್ರಹವಾದಂತೆ ದೇಶದ ಆರ್ಥಿಕ ಅಭಿವೃದ್ಧಿಯು ಹೆಚ್ಚಾಗಿ ದೇಶವು ಅಭಿವೃದ್ಧಿ ಹೊಂದಿದ ದೇಶವಾಗಿ ರೂಪುಗೊಳ್ಳುತ್ತದೆ. ಆದಾಯ ತೆರಿಗೆಗಳಿಂದ ದೇಶದ ಸಂಪತ್ತಿನ ಹರಿವು ಹೆಚ್ಚಾಗಿ ಜನರ ಬೇಡಿಕೆಗಳನ್ನು ಸುಲಭವಾಗಿ ಈಡೇರಿಸಲು ಸರಕಾರಗಳಿಗೆ ಸಹಾಯವಾಗುತ್ತದೆ. ಇದರಿಂದ ದೇಶದ ಸಾಮಾಜಿಕ ಸ್ವರೂಪಗಳು ಬದಲಾಗುತ್ತಾ ಹೋಗುತ್ತವೆ. ಇದರಿಂದ ಸರಕಾರಗಳು ತಮ್ಮ ಅಧಿಕಾರ ವನ್ನು ನಿರಂತರವಾಗಿ ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಅಗತ್ಯ ವಸ್ತುಗಳನ್ನು ವಿದೇಶಗಳಿಂದ ಕೊಂಡುಕೊಂಡು ನಾಗರಿಕರ ಬಯಕೆಗಳನ್ನು ತೃಪ್ತಿ ಪಡಿಸಲು ದಾರಿ ಮಾಡಿಕೊಡುತ್ತದೆ. ಇದರಿಂದ ಸರಕಾರ ಮತ್ತು ಜನರ ಬಾಂಧವ್ಯ ಹೆಚ್ಚಾಗುತ್ತದೆ.

ಉತ್ತಮ ತೆರಿಗೆ ವ್ಯವಸ್ಥೆಗಳು ನಾಗರಿಕರ ಅಗತ್ಯಗಳನ್ನು ಪರಿಗಣಿಸಿ ದೇಶದ ಅಭಿವೃದ್ಧಿಗೆ ಪೂರಕವಾದ ಅಭಿವೃದ್ಧಿ ನೀತಿಗಳನ್ನು ರೂಪಿಸಲು ಎಡೆ ಮಾಡಿಕೊಡು ತ್ತವೆ. ಹೀಗಾಗಿ, ಆದಾಯ ತೆರಿಗೆಯು ಆದಾಯ ಗಳಿಕೆಗೆ ಮಾತ್ರವಲ್ಲದೆ, ನಾಗರಿಕರ ಅಗತ್ಯಗಳನ್ನು ಪೂರೈಸುವ ಮತ್ತು ಸಾಮಾಜಿಕ ಕಲ್ಯಾಣವನ್ನು ಉತ್ತೇಜಿ ಸುವ ಸಾಮರ್ಥ್ಯವಿರುವ ಪರಿಣಾಮಕಾರಿ, ಸ್ವಾವಲಂಬಿ ರಾಷ್ಟ್ರವನ್ನು ಸೃಷ್ಟಿಸಲು ಸಹ ಅತ್ಯಗತ್ಯವಾಗಿದೆ. ಆದಾಯ ತೆರಿಗೆಯ ಪ್ರಾಮುಖ್ಯತೆಯು ಕೇವಲ ಹಣ ಕಾಸಿನ ಪರಿಗಣನೆಗಳನ್ನು ಮೀರಿ ವಿಸ್ತರಿಸುತ್ತದೆ. ಸ್ಥಿರ, ಸಮಾನ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ.

ಆದಾಯ ತೆರಿಗೆ ಎಂದರೆ ವ್ಯಕ್ತಿಗಳು ಅಥವಾ ವ್ಯವಹಾರಗಳು ಒಂದು ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯದ ಮೇಲೆ ಪಾವತಿಸುವ ತೆರಿಗೆಯಾಗಿದೆ. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಗಳಿಸುವ ಎಲ್ಲಾ ವ್ಯಕ್ತಿಗಳು ತಾವು ಗಳಿಸಿದ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಈ ಆದಾಯ ತೆರಿಗೆಗಳ ದರಗಳು ಮತ್ತು ನಿಯಮಗಳನ್ನು ಸರ್ಕಾರ ನಿಯಂತ್ರಿಸುತ್ತವೆ ಮತ್ತು ಕಾಲಕಾಲಕ್ಕೆ ಬದಲಾವಣೆಗೆ ಒಳಪಟ್ಟಿರುತ್ತವೆ. ಎಲ್ಲಾ ತೆರಿಗೆದಾರರು ತಮ್ಮ ಆದಾಯವನ್ನು ನಿಖರವಾಗಿ ವರದಿ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ತೆರಿಗೆಗಳನ್ನು ಸಲ್ಲಿಸುವುದರ ಬಗ್ಗೆ ಜವಾಬ್ದಾರರಾಗಿರುತ್ತಾರೆ. ಒಂದು ವೇಳೆ ತೆರಿಗೆ ಕಟ್ಟಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಭಾರತದಲ್ಲಿನ ಆದಾಯ ತೆರಿಗೆ ವ್ಯವಸ್ಥೆಯನ್ನು ಆದಾಯ ತೆರಿಗೆ ಕಾಯಿದೆ ನಿಯಂತ್ರಿಸುತ್ತದೆ. ಎಲ್ಲಾ ತೆರಿಗೆದಾರರು ತಮ್ಮ ಆದಾಯ ವನ್ನು ವರದಿ ಮಾಡಲು ಮತ್ತು ತೆರಿಗೆ ಮರುಪಾವತಿಯನ್ನು ಪಡೆಯಲು ಕಾನೂನಿನ ಪ್ರಕಾರ ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯ ವಾಗಿದೆ. ತೆರಿಗೆ ಹೊಣೆಗಾರಿಕೆ ಕಡಿಮೆ ಮಾಡಲು ವಿವಿಧ ಕಡಿತ ಮತ್ತು ವಿನಾಯಿತಿಗಳನ್ನು ಸಹ ನೀಡಲಾಗುತ್ತದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಸರ್ಕಾರಕ್ಕೆ ಉಂಟಾದ ನಷ್ಟವನ್ನು ಸರಿದೂಗಿಸಲು ಬ್ರಿಟಿಷ್ ಸರ್ಕಾರ ತೆರಿಗೆ ವಿಧಿಸುವುದನ್ನು ಒಂದು ಮಾರ್ಗವಾಗಿ ಮಾಡಿಕೊಂಡಿತ್ತು. ಸರ್ ಜೇಮ್ಸ್ ವಿಲ್ಸನ್ ೧೮೬೦ರಲ್ಲಿ ತೆರಿಗೆಗಳನ್ನು ಪರಿಚಯಿಸಿದರು ಎಂದು ಹೇಳಲಾಗುತ್ತಿದೆ.

೨೦೨೪-೨೫ ಬಜೆಟ್‌ನಲ್ಲಿ ಸಂಬಳ ಪಡೆಯುವ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗುವಂತೆ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಈ ಹಿಂದೆ ಶೂನ್ಯ ತೆರಿಗೆ ಪಾವತಿಗೆ ಆದಾಯದ ಮಿತಿ ೭ ಲಕ್ಷ ರೂಗಳಾಗಿತ್ತು. ಈ ಮಿತಿಯನ್ನು ೧೨ ಲಕ್ಷ ರೂಗಳಿಗೆ ಹೆಚ್ಚಿಸಿರುವುದರಿಂದ, ಈ ಹಿಂದೆ ೨೦,೦೦೦ ರಿಂದ ೮೦,೦೦೦ ರೂಗಳವರೆಗೆ ತೆರಿಗೆ ಪಾವತಿಸಬೇಕಾಗಿದ್ದ ತೆರಿಗೆದಾರರು ಈಗ ಶೂನ್ಯ ತೆರಿಗೆ ಪಾವತಿಸಲಿ ದ್ದಾರೆ. ಪ್ರತಿ ಬಜೆಟ್‌ಗಳು ಮಂಡನೆಯಾಗುವಾಗ ಆದಾಯ ತೆರಿಗೆದಾರರು ಶೂನ್ಯ ತೆರಿಗೆ ಪಾವತಿಯ ಮಿತಿಯನ್ನು ಹೆಚ್ಚಿಸಬೇಕು ಎಂದು ಬೇಡಿಕೆಯನ್ನು ಮುಂದಿಡುತ್ತಿರುತ್ತಾರೆ. ಏಕೆಂದರೆ ಆದಾಯ ತೆರಿಗೆ ಪಾವತಿಯು ಎಲ್ಲಾ ವರ್ಗದವರಿಗೂ ಹೊರೆಯಾಗಿ ಕಾಣುತ್ತದೆ. ಭಾರತದ ಆದಾಯ ತೆರಿಗೆ ವ್ಯವಸ್ಥೆ ನ್ಯಾಯ ಯುತವಾಗಿಲ್ಲ, ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ಸಂಪಾದನೆ ಮಾಡುವವರಿಗೆ ಹೆಚ್ಚು ತೆರಿಗೆ ಬೀಳುತ್ತದೆ, ಇದರಿಂದ ಮಧ್ಯಮ ವರ್ಗದಲ್ಲಿಯೇ ಬದುಕುವುದು ಉತ್ತಮವಲ್ಲವೇ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಲೇ ಇರುತ್ತವೆ. ಎಷ್ಟೋ ಸಲ ಆದಾಯ ತೆರಿಗೆ ತಪ್ಪಿಸಿಕೊಳ್ಳಲು ತಪ್ಪು ಆದಾಯದ ಲೆಕ್ಕಗಳನ್ನು ತೆರಿಗೆ ದಾರರು ಕೊಡುತ್ತಿರುವುದನ್ನು ಸಹ ನಾವು ನೋಡುತ್ತಿರುತ್ತೇವೆ. ನಾವು ಕಷ್ಟಪಟ್ಟು ದುಡಿಯುವ ಹಣಕ್ಕೆ ನಾವೇಕೆ ತೆರಿಗೆ ಕಟ್ಟಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತವೆ. ಈ ಎಲ್ಲಾ ಅಭಿಪ್ರಾಯಗಳನ್ನು ನಾವು ತಳ್ಳಿ ಹಾಕುವ ಹಾಗಿಲ್ಲ. ಮೇಲ್ನೋಟಕ್ಕೆ ಇದು ನಿಜ ಅನಿಸುತ್ತದೆ. ಇದಲ್ಲದೇ ಪ್ರತಿ ಖರೀದಿಯ ವಸ್ತುಗಳ ಮೇಲೆ ಜಿ.ಎಸ್.ಟಿ ಕೂಡ ಪಾವತಿಸಬೇಕಾಗುತ್ತದೆ. ಒಂದು ದಿನದಲ್ಲಿ ಪ್ರತಿ ವ್ಯಕ್ತಿ ಎಷ್ಟು ತೆರಿಗೆ ಪಾವತಿಸುತ್ತಾನೆ ಎಂಬುದನ್ನು ಲೆಕ್ಕ ಹಾಕಿದರೆ ಒಮ್ಮೆ ಮೈಜುಮ್ ಎನ್ನುತ್ತದೆ. ಏಕೆಂದರೆ ನಮ್ಮ ಆದಾಯದ ಹೆಚ್ಚು ಭಾಗವನ್ನು ಒಂದಲ್ಲಾ ಒಂದು ರೀತಿಯಲ್ಲಿ ತೆರಿಗೆಯಾಗಿ ಪಾವತಿಸುತ್ತೇವೆ. ಇಲ್ಲಿ ಅತೀ ಹೆಚ್ಚು ಸೋತವರು ಯಾರು ಎಂದು ಕೇಳಿದರೆ ಅದು ಸಂಬಳ ಪಡೆಯುತ್ತಿರುವ ನೌಕರರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಹಂತದಲ್ಲಿ ನಾವು ಯೋಚಿಸಬೇಕಾದ ವಿಚಾರವೆಂದರೆ ಆದಾಯ ತೆರಿಗೆ ಮುಕ್ತ ದೇಶವನ್ನು ಕಾಣಲು ಸಾಧ್ಯವಿಲ್ಲವೇ? ಕೆಲವು ದೇಶಗಳು ತಮ್ಮ ನಾಗರಿಕರು ಮತ್ತು ನಿವಾಸಿಗಳ ಮೇಲೆ ಆದಾಯ ತೆರಿಗೆಗಳನ್ನು ವಿಧಿಸುವುದಿಲ್ಲ. ಇದು ಸಾಧ್ಯವೇ? ಹೌದು ಸಾಧ್ಯವಿದೆ. ಒಂದು ದೇಶವು ಇತರ ವಿಧಾನಗಳ ಮೂಲಕ ಸಾಕಷ್ಟು ಹಣವನ್ನು ಗಳಿಸಿದಾಗ ಇದು ಸಾಧ್ಯವಿದೆ. ಕತಾರ್ ಮತ್ತು ಕುವೈತ್‌ನಂತಹ ಕೆಲವು ದೇಶಗಳು ನೈಸಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿವೆ ಮತ್ತು ಅವುಗಳ ತೈಲ ಮತ್ತು ಅನಿಲ ವ್ಯಾಪಾರದಿಂದ ಆದಾಯ ಗಳಿಸುತ್ತವೆ. ಬಹಾಮಾಸ್‌ನಂತಹ ಇತರ ದೇಶಗಳು ಗಣನೀಯ ಹಣವನ್ನು ಸಂಗ್ರಹಿಸಲು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪ್ರಪಂಚದಲ್ಲಿ ಪ್ರಸ್ತುತ ಶೂನ್ಯ ಆದಾಯ ತೆರಿಗೆ ಹೊಂದಿರುವ ೧೭ ದೇಶಗಳಿವೆ. ಆಂಟಿಗುವಾ ಮತ್ತು ಬಾರ್ಬುಡಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಯುಎಇ, ವನವಾಟು, ಬ್ರೂನಿ, ಬಹ್ರೇನ್, ಬಹಾಮಾಸ್, ಬರ್ಮುಡಾ, ಕೇಮನ್ ದ್ವೀಪಗಳು, ಟರ್ಕ್ ಮತ್ತು ಕೈಕೋಸ್ ದ್ವೀಪಗಳು, ಬ್ರಿಟಿಷ್ ವರ್ಜಿನ್ ದ್ವೀಪಗಳು, ಮೊನಾಕೊ, ಸೌದಿ ಅರೇಬಿಯಾ, ಕುವೈತ್, ಕತಾರ್, ಸೊಮಾಲಿಯಾ ಮತ್ತು ಪಶ್ಚಿಮ ಸಹಾರಾ ದೇಶಗಳು ಮುಖ್ಯವಾಗಿವೆ. ತೆರಿಗೆ ರಹಿತ ದೇಶಗಳು ಹಣ ಗಳಿಸುವ ಒಂದು ಮಾರ್ಗವೆಂದರೆ ಕಸ್ಟಮ್ ಮತ್ತು ಅಮದು ಸುಂಕಗಳನ್ನು ವಿಧಿಸುವ ಮೂಲಕ ತಮ್ಮ ದೇಶದ ಆದಾಯವನ್ನು ಹೆಚ್ಚಿಸಿಕೊಳ್ಳುತ್ತದೆ. ಕಾರ್ಪೊರೇಟ್ ನೋಂದಣೆ, ನವೀಕರಣ ಮತ್ತು ನಿರ್ವಹಣಾ ಶುಲ್ಕಗಳು ಸರ್ಕಾರಕ್ಕೆ ನೇರವಾಗಿ ಆದಾಯವನ್ನು ಒದಗಿಸುವುದಲ್ಲದೆ, ಈ ಮಾರುಕಟ್ಟೆಯನ್ನು ಬೆಂಬಲಿಸುವ ಅನೇಕ ಸೇವಾ ಪೂರೈಕೆದಾರರಿಗೂ ಲಾಭವಾಗುತ್ತದೆ. ಪ್ರವಾಸೋದ್ಯಮವು ಸುರಕ್ಷಿತ ಮತ್ತು ಭೇಟಿ ನೀಡಲು ಆಕರ್ಷಕವಾಗಿದ್ದರೆ ಅದು ದೇಶಕ್ಕೆ ದೊಡ್ಡ ಆದಾಯದ ಮೂಲವಾಗುತ್ತದೆ. ಜಾಗತಿಕ ಆರ್ಥಿಕತೆಯಲ್ಲಿ ಪ್ರವಾಸೋದ್ಯಮವು ಪ್ರಬಲ ಪಾತ್ರ ವಹಿಸುತ್ತದೆ. ವಿದೇಶಿ ಹೂಡಿಕೆಗೆ ಹೆಚ್ಚು ಅವಕಾಶ ಮಾಡಿಕೊಟ್ಟು ದೇಶದ ಆದಾಯಗಳನ್ನು ವೃದ್ಧಿಸಿಕೊಳ್ಳುತ್ತದೆ.

ನಾವು ೩೦% ತೆರಿಗೆಯನ್ನು ಪಾವತಿಸಿದರೆ, ಸರ್ಕಾರ ನಮ್ಮ ಆದಾಯದ ಮೂರನೇ ಒಂದು ಭಾಗವನ್ನು ತೆಗೆದುಕೊಳ್ಳುತ್ತದೆ. ಇದರರ್ಥ ನಾವು ವರ್ಷಕ್ಕೆ ೪ ತಿಂಗಳು ಸರ್ಕಾರಕ್ಕಾಗಿ ಕೆಲಸ ಮಾಡುತ್ತಿವೆ ಎಂದೆನಿಸುತ್ತದೆ. ಇದರಿಂದ ಎಲ್ಲರೂ ಆದಾಯ ತೆರಿಗೆಯನ್ನು ದ್ವೇಷಿಸುತ್ತಾರೆ. ಭಾರತದ ಶೇ.೬% ಜನರು ಮಾತ್ರ ನೇರ ತೆರಿಗೆಯನ್ನು ಪಾವತಿಸುತ್ತಾರೆ. ಇದು ಒಂದು ರೀತಿಯ ಅಸಮಾನತೆಯಾಗಿದೆ. ತೆರಿಗೆ ಇಲ್ಲದೆ ಭಾರತ ಬದುಕಲು ಸಾಧವೇ? ಖಂಡಿತ ಸಾಧ್ಯವಿಲ್ಲ. ಆದರೆ ಕೆಲವು ಸೃಜನಶೀಲ ಪರಿಹಾರದ ಮೂಲಕ ಭಾರತದಲ್ಲಿ ಜನರ ಮೇಲೆ ಆಗುತ್ತಿರುವ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದು ಅತೀ ಅವಶ್ಯಕವಾಗಿದೆ. ವಿವಿಧ ವಲಯಗಳಿಗೆ ತೆರಿಗೆಯ ನೆಲೆಗಳನ್ನು ವಿಸ್ತರಿಸುವ ಮೂಲಕ ಹೊರೆಯನ್ನು ಕಡಿಮೆ ಮಾಡಬಹುದು. ಕಾಂಬೋಡಿಯಾದಂತಹ ದೇಶಗಳು ಹೂಡಿಕೆಯ ಮೂಲಕ ಪೌರತ್ವವನ್ನು ನೀಡುತ್ತದೆ. ಭಾರತದಲ್ಲೂ ಈ ವ್ಯವಸ್ಥೆಯನ್ನು ಜಾರಿಗೊಳಿಸಬಹುದು. ವೆಚ್ಚಗಳನ್ನು ನಿರ್ವಹಿಸಲು ಸರಿಯಾದ ಕ್ರಮವನ್ನು ಅನುಸರಿಸಬೇಕು. ದೇಶದಲ್ಲಿ ಉಚಿತ ಯೋಜನೆಗಳನ್ನು ಕಡ್ಡಾಯವಾಗಿ ರದ್ದುಪಡಿಸಬೇಕು. ಏಕೆಂದರೆ ಈ ಉಚಿತ ಯೋಜನೆಗಳಿಗೆ ಬಳಸುವ ಹಣ ತೆರಿಗೆದಾರರ ಜೇಬಿನಿಂದ ಬಂದದಾಗಿರುತ್ತದೆ. ಅದ್ದರಿಂದ ಅತಿಯಾದ ತೆರಿಗೆಯನ್ನು ವಿಧಿಸುವ ಬದಲು ಕಡಿಮೆ ತೆರಿಗೆ ವಿಧಿಸಿ, ತೆರಿಗೆ ಹಣವನ್ನು ವ್ಯವಸ್ಥಿತವಾಗಿ ಬಳಸಲು ಸರ್ಕಾರಗಳು ಚಿಂತಿಸಬೇಕು. ಇತ್ತ ತೆರಿಗೆದಾರರು ತಮ್ಮ ತೆರಿಗೆಯ ಹಣವು ಸರಿಯಾಗಿ ಬಳಸಲಾಗುತ್ತಿಯೇ ಎಂಬುದರ ಬಗ್ಗೆ ನಿಗಾ ಇಡಬೇಕು. ‘ನನ್ನ ತೆರಿಗೆ ದೇಶದ ಯೋಗ್ಯ ಕೆಲಸಕ್ಕೆ ಮಾತ್ರ’ ಎಂಬ ಹಣೆಪಟ್ಟಿಯಲ್ಲಿ ಜನಾಂದೋಲನವಾಗಿ ಮಾರ್ಪಡಬೇಕು.

ಭಾರತದಲ್ಲಿ ಜುಲೈ ೨೪ರಂದು ತೆರಿಗೆ ದಿನವನ್ನು ಆಚರಿಸಲಾಗುತ್ತದೆ. ಈ ದಿನಾಚರಣೆಯನ್ನು ತೆರಿಗೆದಾರರು ದೇಶದ ಎಲ್ಲೆಡೆ ಆಚರಿಸಿ ತಮ್ಮ ತೆರಿಗೆ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಯೇ ಎಂಬುದರ ಬಗ್ಗೆ ನಾಗರಿಕರಿಗೆ ಮಾಹಿತಿಯನ್ನು ರವಾನಿಸುವ ಕೆಲಸ ಮಾಡಬೇಕು. ಇದರಿಂದ ಭವಿಷ್ಯದ ಭಾರತ ಶೂನ್ಯ ತೆರಿಗೆ ರಾಷ್ಟ್ರವಾಗಿ ಮಾರ್ಪಡಾಗಬಹುದು. ಭಾರತ ದೇಶವು ದೊಡ್ಡ ದೇಶವಾಗಿರುವುದರಿಂದ ಮತ್ತು ಎಲ್ಲಾ ಸಂಪನ್ಮೂಲಗಳನ್ನು ಸರಿಯಾಗಿ ಬಳಸುವುದರಿಂದ ಇದು ಖಂಡಿತ ಸಾಧ್ಯವಾಗುತ್ತದೆ. ಕೊನೆಯದಾಗಿ, ಕಷ್ಟಪಟ್ಟು ದುಡಿಯುವ ಜನರಿಗೆ ವಿಧಿಸುವ ತೆರಿಗೆಯ ಶೇ.ಪ್ರತಿಶತದಲ್ಲಿ ಕಡಿಮೆಯಾಗಲಿ ಎಂದು ಆಶಿಸೋಣ.

ದಿಲೀಪ್ ಕುಮಾರ್ ಸಂಪಡ್ಕ
ಹವ್ಯಾಸಿ ಬರಹಗಾರ, ದಕ್ಷಿಣ ಕನ್ನಡ
೯೪೪೮೬೫೮೫೦೩

Related Posts

Leave a Reply

Your email address will not be published. Required fields are marked *