“ಕುಡಿಯುವುದಕ್ಕೆ ನೀರು, ತಲೆ ಮೇಲೆ ಸೂರು, ಹಸಿದಾಗ ಅನ್ನ, ಬದುಕಿಗೆ ಶಿಕ್ಷಣ ಇವುಗಳನ್ನು ನೀಡುವುದೇ ನಮ್ಮ ಕಾಂಗ್ರೆಸ್ ಪಕ್ಷದ ವಾಗ್ದಾನ. ಇದೇ ನಮ್ಮ ಆಧಾರ ಸ್ತಂಭ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೀದರ್ ಜಿಲ್ಲಾ ಕೇಂದ್ರದ ನೆಹರು ಕ್ರೀಡಾಂಗಣದಲ್ಲಿ ನಡೆದ ರೂ.2025 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಬೆಂಗಳೂರಿಗೆ ನಾಗರಿಕ ವಿಮಾನಯಾನ ಸೇವೆ ಪುನರಾರಂಭಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ನನ್ನ ಹಾಗೂ ಬೋಸರಾಜು ಅವರ ಇಲಾಖೆ ಸೇರಿ ರೂ.22 ಸಾವಿರ ಕೋಟಿ ಅನುದಾನವಿದೆ. ಆದರೂ ಮೆಹಕರ್ ಏತ ನೀರಾವರಿ ಯೋಜನೆ ಹಾಗೂ ಔರಾದ್ ತಾಲ್ಲೂಕಿನ 36 ಕೆರೆಗಳನ್ನು ತುಂಬಿಸುವ ಯೋಜನೆಗೆ ಸಣ್ಣ ಹಾಗೂ ಬೃಹತ್ ನೀರಾವರಿ ಇಲಾಖೆಯಿಂದ ರೂ.1,322 ಕೋಟಿ ರೂಪಾಯಿ ಅನುದಾನ ನೀಡಲಾ ಗಿದೆ.” ಎಂದು ಹೇಳಿದರು.
“ಈ ಭಾಗದ ರೈತರ ಬದುಕನ್ನು ಹಸನು ಮಾಡುವುದೇ ನಮ್ಮ ಉದ್ದೇಶ. ಇವನಾರವ, ಇವನಾರವ ಎಂದು ಹೇಳದೆ, ಇವ ನಮ್ಮವ, ಇವ ನಮ್ಮವ ಎಂದು ಬಸವಣ್ಣನವರ ಆಶಯದ ಮೇಲೆ ಕೆಲಸ ಮಾಡುವುದೇ ನಮ್ಮ ಗುರಿ, ಉದ್ದೇಶ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸುಮಾರು ರೂ.5 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ನಮ್ಮ ಭಾಗದಲ್ಲಿಯೇ ಇಷ್ಟು ಕೆಲಸಗಳನ್ನು ಮಾಡಲು ಆಗುತ್ತಿಲ್ಲ. ಅಧಿಕಾರ ನಶ್ವರ, ನಮ್ಮ ಸಾಧನೆಗಳು ಅಜರಾಮರ, ಮತದಾರನೇ ಈಶ್ವರ. ಆದ ಕಾರಣಕ್ಕೆ ನಿಮ್ಮ ಋಣ ತೀರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ” ಎಂದು ಹೇಳಿದರು.
“ಮಲ್ಲಿಕಾರ್ಜುನ ಖರ್ಗೆ ಅವರು, ಧರ್ಮ ಸಿಂಗ್ ಅವರು ಅಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು 371 ಜೆ ಎನ್ನುವ ವರವನ್ನು ಈ ಭಾಗಕ್ಕೆ ನೀಡಿದರು. ಅದನ್ನು ಬಳಸಿಕೊಂಡು ಈ ಭಾಗಕ್ಕೆ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ರೂ.2,025 ಕೋಟಿ ಮೊತ್ತದ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಮ್ಮಿಕೊಳ್ಳಲಾ ಗಿದೆ. ಬೀದರ್ ಜಿಲ್ಲೆಯ ಮೇಲೆ ನನಗೆ ಮೊದಲಿನಿಂದಲೂ ಅಪಾರವಾದ ವಿಶ್ವಾಸ. ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸವಿತ್ತು ಆದರೆ ಎರಡು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿತು” ಎಂದರು.
“ಮಲ್ಲಿಕಾರ್ಜುನ ಖರ್ಗೆ ಅವರು ಈ ಜಿಲ್ಲೆಯ ಇಬ್ಬರು ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂದ ಕಾರಣಕ್ಕೆ ಅತ್ಯುತ್ತಮ ಸ್ಥಾನವನ್ನು ಅಲಂಕರಿಸಿದ್ದಾರೆ. ಲೋಕಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸ್ಥಾನಗಳಲ್ಲೂ ನಮ್ಮ ಕೈ ಹಿಡಿದವರು ನೀವು. ಯುವಕ ಸಾಗರ್ ಖಂಡ್ರೆ ಅವರನ್ನು ಸಂಸತ್ತಿಗೆ ಕಳುಹಿಸಿದ ನಿಮಗೆ ಕೋಟಿ ನಮನಗಳು” ಎಂದು ಹೇಳಿದರು.
“ಬುದ್ದ, ಬಸವ ಮನೆಬಿಟ್ಟ, ಏಸುಕ್ರಿಸ್ತ ಶಿಲುಬೆಗೆ ಏರಿದ, ಅಂಬೇಡ್ಕರ್ ಅವರು ಜನಿಸಿದ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡ, ಸೋನಿಯಾ ಗಾಂಧಿ ಅವರು ಅಧಿಕಾರ ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಬಿಟ್ಟುಕೊಟ್ಟ, ಬೀದರ್ ಜಿಲ್ಲೆಗೆ ಹೊಸರೂಪ ನೀಡುವ, ಅಭಿವೃದ್ಧಿಯ ಪರ್ವದ ಘಳಿಗೆಯಲ್ಲಿ ನಿಂತಿದ್ದೇವೆ” ಎಂದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಗಜ್ಯೋತಿ ಬಸವಣ್ಣನವರ ಮೇಲೆ ಅಪಾರ ಅಭಿಮಾನ. ಬಸವಣ್ಣನ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಚಿವರಾದ ಈಶ್ವರ ಖಂಡ್ರೆ ಅವರು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ” ಎಂದು ತಿಳಿಸಿದರು.
“ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತದೆ. ನಾವು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಆದರೆ ಬಿಜೆಪಿಯವರಿಗೆ ಬಸವಣ್ಣನವರ ಆಶಯಗಳ ಮೇಲೆ ನಂಬಿಕೆಯಿಲ್ಲ. ಸುವರ್ಣ ಸೌಧ, ವಿಧಾನಸೌಧದಲ್ಲಿ ಅನಜಭವ ಮಂಟಪದ ತೈಲವರ್ಣ ಚಿತ್ರವನ್ನು ಅನಾವರಣ ಮಾಡಲಾಗಿದೆ. ರಾಹುಲ್ ಗಾಂಧಿ ಅವರು ಸಹ ಹಲವಾರು ಬಾರಿ ಬಸವಣ್ಣನವರ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ” ಎಂದು ಹೇಳಿದರು.