Menu

ದ್ರಾವಿಡ ಪಾರ್ಟಿಗಳ ಮುಂದೆ ಮಂಡಿಯೂರಿದ ಬಿಜೆಪಿ

ವಕ್ಫ್ ವಿಧೇಯಕದ ಸಂಸತ್ ಅನುಮೋದನೆ ಬಳಿಕ, ಹಂಡ್ರೆಡ್ ಪರ್ಸೆಂಟ್ ಹಿಂದೂ ಮತಗಳು ಕನ್ಸಾಲಿಡೇಟ್ ಆಯಿತೆಂದು ಬಗೆದರೆ ಅದು ಬಿಜೆಪಿ ಭ್ರಮೆಯಷ್ಟೆ. ಜಾತ್ಯತೀತ ಪಾರ್ಟಿಗಳ ಜೊತೆ  ರಾಜಿ ಮಾಡಿಕೊಳ್ಳದಿದ್ದಲ್ಲಿ  ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಉಳಿಯುವುದೂ ಬಲು ಕಷ್ಟ.

-ಪಿ.ರಾಜೇಂದ್ರ, ಲೇಖಕರು

ದಕ್ಷಿಣ ಭಾರತದಲ್ಲಿ  ಪ್ರಾದೇಶಿಕ  ಪಕ್ಷಗಳ ಜೊತೆ ಬಿಜೆಪಿಗೆ  ನಂಟು ಅನಿವಾರ್ಯವೆಂಬ ರಾಜಕೀಯ ಸನ್ನಿವೇಶ ಹಾಗೂ ವಾತಾವರಣ ಮತ್ತೆ ನಿರ್ಮಾಣ ವಾದಂತಿದೆ. ಹದಿನೈದು  ವರ್ಷಗಳ  ಹಿಂದೆ  ಅಟಲ್ ಬಿಹಾರಿ ವಾಜಪೇಯಿ ಅತ್ತ  ಮಾಯಾವತಿ  ಮತ್ತು ಇತ್ತ ಜಯಲಲಿತ ಹಾಗೂ  ಚಂದ್ರಬಾಬು  ಜೊತೆ  ರಾಜಕೀಯವಾಗಿ ಜಂಟಿಯಾಗಿ ಸಂಸಾರ  ಮಾಡುವುದು ಅನಿವಾರ್ಯವಾಗಿತ್ತು.  ಒಳಗೊಳಗೆ  ನೂರೊಂದು  ಅತೃಪ್ತಿ  ಮತ್ತು ಅಸಮಾಧಾನಗಳಿದ್ದರೂ  ಅಧಿಕಾರವನ್ನು  ಉಳಿಸಿಕೊಳ್ಳುವ   ದೃಷ್ಟಿಯಿಂದ  ವಾಜಪೇಯಿ  ಅಂದು ಉಸಿರು ಬಿಗಿಹಿಡಿದು ಎನ್‌ಡಿಎ ಸರ್ಕಾರವನ್ನು  ಮುಂದಕ್ಕೆ  ತಳ್ಳಿಕೊಂಡು ಹೋಗು ವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.  ಈಗ ಮತ್ತೆ  ನರೇಂದ್ರ ಮೋದಿ  ಸರ್ಕಾರಕ್ಕೆ  ಅದೇ  ಪರಿಸ್ಥಿತಿ ಉಂಟಾಗಿದೆ.

ಎಂಟು  ವರ್ಷಗಳ   ಹಿಂದೆಯೇ ಬಹಳ  ವಿಶ್ವಾಸಪೂರ್ವಕವಾಗಿ ಅಮಿತ್ ಶಾ  ತೆಲಂಗಾಣದಲ್ಲಿ ಬಿಜೆಪಿ ಕೋಟೆಗಳನ್ನು ವಿಸ್ತರಿಸುವ  ಬೃಹತ್  ಸಾಹಸಕ್ಕೆ ಕೈ ಹಾಕಿದರು.  ಯಾವಾಗ ೨೦೧೮ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರವನ್ನು ರಚಿಸುವ ಸಮೀಪಕ್ಕೆ  ಬಂದು ನಿಂತಿತೋ, ಆ  ಕ್ಷಣ ದಿಂದಲೇ ಅಮಿತ್ ಶಾ ಮತ್ತು ಮೋದಿ ದಕ್ಷಿಣ ಭಾರತವನ್ನು ಸಂಪೂರ್ಣವಾಗಿ ತನ್ನ ಅಧಿಪತ್ಯಕ್ಕೆ ಪಡೆಯಲು ಬಹುದೊಡ್ಡ ಬಲೆಯನ್ನು ಬೀಸಿದರು. ಆಗತಾನೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡದ ಕಾರಣದಿಂದ  ಮೋದಿ  ಸರ್ಕಾರದ  ಮೇಲೆ  ಮುನಿಸಿಕೊಂಡ  ತೆಲುಗುದೇಶಂ ಎನ್‌ಡಿಎ  ಕೂಟದಿಂದ  ಬಿಡಿಸಿಕೊಂಡು  ಕಾಂಗ್ರೆಸ್  ಜೊತೆ  ಸಖ್ಯ ಬೆಳೆಸಿದ  ದಿನಗಳವು.  ಗ್ರೇಟರ್ ಹೈದರಾಬಾದ್  ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆ  ಹಾಗೂ  ಉಪಚುನಾವಣೆಗಳ  ಮೂಲಕ   ತನ್ನ  ಶಕ್ತಿ   ಸಾಬೀತುಪಡಿಸಲು  ಶಾ  ಹಾಗೂ  ಮೋದಿ  ಇನ್ನಿಲ್ಲದಂತಹ  ಪ್ರಯತ್ನ  ನಡೆಸಿದರೂ,  ಬಿಜೆಪಿ   ಇಲ್ಲಿ  ಅಧಿಕಾರವನ್ನು ಹಿಡಿಯಲು  ಆಗಲಿಲ್ಲ.  ಟಿಆರ್‌ಎಸ್ ಅಧಿಕಾರವಿಲ್ಲಿ  ಅಂತ್ಯಗೊಂಡರೂ  ಈ  ಜಾಗದಲ್ಲಿ  ಶತಾಯಗತಾಯ   ತಮ್ಮ  ರಾಜಕೀಯ  ವಸಾಹತುಗಳನ್ನು     ಹಿಗ್ಗಿಸಿಕೊಳ್ಳಬೇಕೆಂಬ ದಿಲ್ಲಿ  ಕಮಲಪತಿಗಳ  ಪ್ರಬಲ  ರಾಜಕೀಯ  ಆಕಾಂಕ್ಷೆಗಳೆಲ್ಲವೂ ಕಮರಿ ಹೋಗಿದ್ದು ಕಟುಸತ್ಯ.  ಒಟ್ಟಿನಲ್ಲಿ  ಬಿಜೆಪಿಗೆ ದೊಡ್ಡ  ಸವಾಲಾಗಿರುವುದು  ದಕ್ಷಿಣ ಭಾರತದಲ್ಲಿ  ತನ್ನ  ರಾಜಕೀಯ  ಪ್ರಾಬಲ್ಯವನ್ನು  ದಿನೇದಿನೇ  ವೃದ್ಧಿಸಿಕೊಳ್ಳುತ್ತಿರುವ   ದ್ರಾವಿಡ  ಪಕ್ಷಗಳು.

ಆದರೆ ಈ  ಮಟ್ಟಿಗೆ  ಜೆಡಿಎಸ್ ಕರ್ನಾಟಕದಲ್ಲಿ, ಟಿಡಿಪಿ, ಡಿಎಂಕೆ  ಮತ್ತು  ಟಿಆರ್‌ಎಸ್  ತನ್ನ  ಸ್ವಂತ   ಶಕ್ತಿಯ  ಮೇಲೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯು ವಂತಹ ರೀತಿಯಲ್ಲಿ ತನ್ನ ರಾಜಕೀಯ   ಶಕ್ತಿಯನ್ನು  ಹೆಚ್ಚಿಸಿಕೊಂಡಿಲ್ಲ.  ತೆಲಂಗಾಣದಲ್ಲಿ ಬಿಜೆಪಿ ತನ್ನ ಶಕ್ತಿಯೆಲ್ಲವನ್ನೂ ಪಣಕ್ಕಿಟ್ಟು  ಅಖಾಡಕ್ಕೆ  ಧುಮುಕಿದ  ಹಾಗೆ   ಆಂಧ್ರ  ಮತ್ತು  ತಮಿಳುನಾಡಿನಲ್ಲಿ ಯಾಕಿದು   ಕೈಗೂಡುತ್ತಿಲ್ಲ ಎಂಬುದು  ಯಕ್ಷ  ಪ್ರಶ್ನೆ.  ಅಸಲಿಗೆ  ಅಂಧ್ರದಲ್ಲಿ  ಬಿಜೆಪಿ  ಸ್ವಂತ  ನೆಲೆಗಳನ್ನು ಗಟ್ಟಿಗೊಳಿಸಲು  ಮೋದಿ- ಶಾ ಯಾಕೆ  ಆಲೋಚಿಸಲಿಲ್ಲ  ಎಂಬುದೂ  ಒಂದು  ಗಂಭೀರ  ಪ್ರಶ್ನೆ.  ಯಾವಾಗ  ಟಿಡಿಪಿ  ಎನ್‌ಡಿಎ  ಕೂಟದಿಂದ  ದೂರ ಸರಿಯಿತೋ, ಆಗ ಅಂಧ್ರದಲ್ಲಿ ಬಿಜೆಪಿಯನ್ನು ಮೇಲಕ್ಕೆ ಎಬ್ಬಿಸುವ ಕೆಲಸ   ಶುರುವಾದರೂ  ಅದು ಕಾರಣಾಂತರಗಳಿಂದ  ಅರ್ಧಕ್ಕೆ  ನಿಂತು ಹೋಗಿದ್ದು  ಸತ್ಯಕ್ಕೆ   ದೂರವಾದ  ಸಂಗತಿಯೇನಲ್ಲ.

ಲೋಕಲ್  ಬಿಜೆಪಿ   ಇಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲು  ಸಾಧ್ಯವಿಲ್ಲ  ಎಂಬುದನ್ನು ದಿಲ್ಲಿ  ಬಿಜೆಪಿಯವರು ಮನಗಂಡರು. ಪವನ್ ಕಲ್ಯಾಣ್ ಅಂತಹ  ನಾಯಕ   ಬಿಜೆಪಿಗೆ  ಇಲ್ಲಿ  ಸಿಗಲಿಲ್ಲ. ಮಿಗಿಲಾಗಿ  ಪವವ್  ಸಂಪೂರ್ಣವಾಗಿ    ತಾವೇ  ಹುಟ್ಟುಹಾಕಿದ  ಜನಸೇನಾ  ಪಕ್ಷವನ್ನು  ಬಿಜೆಪಿ   ಜೊತೆ  ವಿಲೀನಗೊಳಿಸಲು ಇಚ್ಛಿಸಲಿಲ್ಲ. ಈಗಲೂ  ಅವರಿಗೆ  ಇಂತಹ ಆಲೋಚನೆ ಇಲ್ಲ . ಏಕೆಂದರೆ ಅವರಣ್ಣ ಚಿರಂಜೀವಿ  ಇಂತಹುದೇ  ತಪ್ಪು  ಮಾಡಿ   ತಾವೇ  ಸ್ಥಾಪಿಸಿದ್ದ  ಪ್ರಜಾರಾಜ್ಯಂ ಪಕ್ಷವನ್ನು   ಕಾಂಗ್ರೆಸ್  ಪಕ್ಷದಲ್ಲಿ  ವಿಲೀನಗೊಳಿಸಿ  ಎಲ್ಲ  ರೀತಿಯಲ್ಲಿ  ನಷ್ಟ  ಅನುಭವಿಸಿದರು.  ಈ ದಿಶೆಯಲ್ಲಿ ಪವನ್, ಜಗನ್  ಮತ್ತು   ಜನಸೇನಾ  ರಾಜಕೀಯ ಶಕ್ತಿಗಳನ್ನು  ಎದುರು ಹಾಕಿಕೊಂಡು  ದೈತ್ಯಾಕಾರ ರೂಪದಲ್ಲಿ  ಬಿಜೆಪಿ  ಬೆಳೆಯಬೇಕೆಂಬ  ರಾಜಕೀಯ  ಮಹದಾಸೆಗಳಿದ್ದರೂ  ಅವುಗಳು ಯಾವುದೂ   ತಮ್ಮ  ಕೈಗೆ ಎಟುಕುವುದಿಲ್ಲ  ಎಂಬ  ಕಟುಸತ್ಯಗಳ   ಹಿನ್ನೆಲೆಯಲ್ಲಿಯೇ   ಮತ್ತೆ  ಬಿಜೆಪಿ  ವರಿಷ್ಠರು ಟಿಡಿಪಿ ಮತ್ತು  ಡಿಎಂಕೆ  ಜೊತೆ  ಸಖ್ಯ  ಬೆಳೆಸಲು  ಹೊರಟಿರುವುದು.   ಲೋಕಸಭೆ ಚುನಾವಣೆಗೆ  ಮುನ್ನ  ಬಿಜೆಪಿಗೆ ಆಂಧ್ರದಲ್ಲಿ ತೆಲುಗುದೇಶಂ   ಜೊತೆ ಮೈತ್ರಿ ಅನಿವಾರ್ಯ  ಇತ್ತೋ ಇರಲಿಲ್ಲವೊ ಎಂಬುದು  ಬೇರೆ  ಮಾತು.

ಆದೇನೆ  ಇರಲಿ, ಬಾಬುವನ್ನು ಮತ್ತೆ ಎನ್‌ಡಿ ಎ ಕೂಟಕ್ಕೆ ಸೇರಿಸುವ ಕೆಲಸದಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದು  ಪವನ್  ಮತ್ತು  ಬಿ.ಎಲ್.ಸಂತೋಷ್  ಎಂಬುದು ಗಮನಾರ್ಹ. ಒಂದು ವೇಳೆ  ಅಂದು ದಿಲ್ಲಿ  ಬಿಜೆಪಿ  ವರಿಷ್ಠರು  ಟಿಡಿಪಿ  ಜೊತೆ  ಸಖ್ಯ   ಬೇಡ  ಎಂದಿದಿದ್ದರೆ ?  ರಾಜಕಾರಣದಲ್ಲಿ  ಒಮ್ಮೊಮ್ಮೆ ಆಗುವ  ಲೆಕ್ಕಾಚಾರ ಗಳು ಪಕ್ಷಗಳ ಹಣೆಬರಹವನ್ನೇ ಬದಲಾಯಿಸಿಬಿಡುತ್ತವೆ. ಅತಿ  ಕಡಿಮೆ  ಸ್ಥಾನ  ಪಡೆದ  ಜೆಡಿಎಸ್   ಕೂಡಾ ಸೆಂಟ್ರಲ್  ಕ್ಯಾಬಿನೆಟ್‌ನಲ್ಲಿ  ಒಂದು ಸ್ಥಾನ ಪಡೆಯುತ್ತೆ  ಎಂದಾಗ ಇದನ್ನು ದೇವೇಗೌಡರಾಗಲೀ,  ಕುಮಾರಸ್ವಾಮಿ ಅವರಾಗಲಿ ತಮಗೆ  ದೊರೆತಿದ್ದು  ನಮ್ಮ ಹಕ್ಕು  ಎಂದೆನ್ನುವರೇ ವಿನಹ ಬಿಜೆಪಿಯ  ದಯಾ ದಾಕ್ಷಿಣ್ಯ ಎಂದು  ಖಂಡಿತವಾಗಿಯೂ ಹೇಳುವುದಿಲ್ಲ. ಈಗಲೂ ಅಷ್ಟೆ.  ರಾಜ್ಯ ಬಿಜೆಪಿ  ಮತ್ತು  ಜೆಡಿಎಸ್  ಜೊತೆ  ಹೇಳಿಕೊಳ್ಳುವಂತಹ ಸ್ನೇಹ ಮತ್ತು  ಬಾಂಧವ್ಯಗಳೇನೂ ಇಲ  !  ಮೊನ್ನೆ  ಪ್ರಾರಂಭಗೊಂಡ   ಜನಾಕ್ರೋಶ ಯಾತ್ರೆಯಲ್ಲಿ  ಬಿಜೆಪಿ ಜೊತೆ  ಜೆಡಿಎಸ್ ಯಾಕೆ  ಕೈ ಜೋಡಿಸಿಲ್ಲ  ಎಂಬ ಪ್ರಶ್ನೆಯನ್ನು ಸಹಜವಾಗಿ  ಜನರು ಕೇಳುತ್ತಾರೆ.  ಹಾಗಾದರೆ  ಬಿಜೆಪಿ  ಮತ್ತು    ಜೆಡಿಎಸ್  ಮೈತ್ರಿಗೆ   ಇರುವಂತಹ  ಅರ್ಥವಾದರೂ  ಏನು?

ಇನ್ನು ತಮಿಳುನಾಡಿನ ಈಗಿನ ಪರಿಸ್ಥಿತಿ  ನೋಡಿದಾಗ, ಮತ್ತೆ ಅಣ್ಣಾಡಿಎಂಕೆ  ಎನ್‌ಡಿಎ ತೆಕ್ಕೆಗೆ  ಬಂದಿದೆ!  ಇದು ಅಣ್ಣಾಮಲೈ  ದಿಟ್ಟ  ಪ್ರಯತ್ನಗಳಿಗೆ  ಚೆಕ್  ಆಯಿತೇ ಅಥವಾ ಇಲ್ಲಿನ  ಅಣ್ಣಾ  ಡಿಎಂಕೆ ನಾಯಕರು  ಡಿಎಂಕೆ ನಾಯಕರಿಗೆ  ಚೆಕ್ ಆಗಿ  ನಿಲ್ಲಲು  ನೆರವಾಗುತ್ತಾ?  ಅಸಲಿಗೆ  ಬಿಜೆಪಿ   ಜೊತೆ  ಮೈತ್ರಿ  ಬೇಕಿರುವುದು ಅಣ್ಣಾ ಡಿಎಂಕೆಗೋ  ಅಥವಾ  ಸ್ಟಾಲಿನ್  ಮೇಲೆ   ಮೇಲುಗೈ  ಸಾಧಿಸಲು  ಬಿಜೆಪಿಗಿದು  ಅನಿವಾರ್ಯವಾಯಿತೇ? ಉತ್ತರ – ದಕ್ಷಿಣದಂತಿರುವ ಅಣ್ಣಾ ಮಲೈ ಮತ್ತು ಅಣ್ಣಾ ಡಿಎಂಕೆ ನಾಯಕರ ನಡುವೆ  ಮೋದಿ ನಡ್ಡಾ  ಅಥವಾ  ಶಾ  ಪ್ರತಿ  ನಿತ್ಯ ಮೀಡಿಯೇಷನ್ ಮಾಡಲಂತೂ ಸಾಧ್ಯವಿಲ್ಲ.  ಜಯಲಲಿತಾ ನಂತರ ಈ ಸ್ಥಾನವನ್ನು  ತುಂಬುವುದರಲ್ಲಿ  ಪಕ್ಷದ  ಈಗಿನ  ನಾಯಕರಲ್ಲಿ  ಈ ಶಕ್ತಿ  ಕಾಣುತ್ತಿಲ್ಲ. ಇಲ್ಲಿ ಕೂಡಾ ಅಷ್ಟೇ.  ಅಣ್ಣಾ ಮಲೈ  ಮೂಲಕ  ದಿಲ್ಲಿ  ಬಿಜೆಪಿ  ವರಿಷ್ಠರು  ಅದೆಷ್ಟೇ  ಅಚ್ಚರಿಗಳನ್ನು ಸೃಷ್ಟಿಸಬೇಕೆಂದು ಬಯಸಿದರೂ ದ್ರಾವಿಡ ಮನಸ್ಕರನ್ನು  ಉತ್ತರ ಭಾರತದಲ್ಲಿ  ಸುಲಭವಾಗಿ  ಗೆದ್ದಷ್ಟು  ಇಲ್ಲಿ ಸರಳವಲ್ಲ ಎಂಬುದನ್ನು ಮನಗಂಡಿದ್ದಾರೆ.    ಡಿಲಿಮಿಟೇಷನ್ ಭೂತದ ಮೂಲಕ ಒಂದಷ್ಟು ಲೋಕಸಭೆ ಸೀಟುಗಳನ್ನು ದಕ್ಷಿಣದಲ್ಲಿ ಕಡಿಮೆ ಮಾಡಬೇಕೆಂಬ ಹಿಡನ್  ಅಜೆಂಡಾ ಅನ್ನು ಬಿಜೆಪಿ ಹೊಂದಿದೆ. ಆದರೆ ಈ ಅಜೆಂಡಾ ಫಾರ್ಮುಲಾ ಕೂಡಾ ಶೇಕಡಾ ನೂರರಷ್ಟು ಫಲಿಸಬೇಕಾದರೆ ಮತ್ತೆ ಬಿಜೆಪಿ ಇಲ್ಲಿ ದ್ರಾವಿಡ ಪಕ್ಷಗಳ ಸತ್ತಾ ಮುಂದೆ ಮಂಡಿಯೂರದೆ ವಿಧಿಯಿಲ್ಲ!

ಸಂಸತ್ತಿನಲ್ಲಿ ವಕ್ಫ್ ವಿಧೇಯಕ ಮಂಡನೆಯಾಗಿ ಅದು  ಉಭಯ  ಸದನಗಳ ಒಪ್ಪಿಗೆ  ಪಡೆದ  ಮೇಲೆ ತನ್ನ  ಸಹಭಾಗಿಗಳ  ಮನದಾಳವೇನು? ಈ  ವಿಚಾರದಲ್ಲಿ ಟಿಡಿಪಿ ಮತ್ತು ಜೆಡಿಯು ರಿವರ್ಸ್ ಆದರೂ  ಅಚ್ಚರಿಯಿಲ್ಲ.  ಕೊನೆಗೆ ಕುಮಾರಸ್ವಾಮಿ ಕೂಡಾ.. !!  ಎನ್‌ಡಿಎ ಈಗ ರಾಜಕೀಯವಾಗಿ ಸೂಕ್ಷ್ಮ  ಪರಿಧಿಯಲ್ಲಿದೆ.  ಅನುಕೂಲಸಿಂಧು  ರಾಜಕಾರಣದಲ್ಲಿ ಯಾವ ಪಕ್ಷದ  ನಾಯಕನ  ನಿಷ್ಠೆ  ಹ್ಯಾಗೆ ಬದಲಾಗುತ್ತೆ ಎಂಬುದನ್ನು ಹೇಳಲಾಗದು. ಸುಪ್ರೀಂಕೋರ್ಟ್ ಮುಂದೆ   ಸರ್ಕಾರದ  ತೀರ್ಮಾನಗಳ  ಹಣೆಬರಹವೇನು? ಇದು ಕೂಡಾ  ಟಿಡಿಪಿ ಮತ್ತು  ಜೆಡಿಯು ಮತ್ತು   ಜೆಡಿಎಸ್  ಮೇಲೆ ಖಂಡಿತವಾಗಿಯೂ  ಪರಿಣಾಮ  ಬೀರು ವಂತಹದು. ವಕ್ಫ್ ವಿಧೇಯಕದ ಮೂಲಕ   ಬಿಜೆಪಿ  ಸಾರಾಸಗಟಾಗಿ  ದೇಶದ  ಹಿಂದೂ ಮತಗಳನ್ನು  ಕ್ರೋಢೀಕರಿಸಿಬಿಟ್ಟಿತು ಎಂಬುದು  ಬರೀ ಭ್ರಮೆ.

ಇದರಿಂದ ಮುಂದಿನ  ದಿನಗಳಲ್ಲಿ  ಬಿಜೆಪಿಗೆ  ಉತ್ತರದಲ್ಲಿಯೇ  ತುಸು ಹಿನ್ನಡೆಯಾದರೂ ಅಚ್ಚರಿಯಿಲ್ಲ.  ಕಳೆದ   ಲೋಕಸಭೆ  ಚುನಾವಣೆಯಲ್ಲಿ  ಚಾರ್ ಸೌ ಪಾರ್ ಎಂಬ  ಮಹಾ ಗುಂಗಿನಲ್ಲಿದ್ದ   ಬಿಜೆಪಿಗೆ    ದೇಶದ    ಪೊಲಿಟಿಕಲ್  ರಿಯಾಲಿಟಿಗಳೂ ಗೊತ್ತಾಗಿದೆ. ಇಂತಹ ರಿಯಾಲಿಟಿಗಳ  ನಡುವೆಯೇ  ಮುಂದಿನ  ದಿನಗಳಲ್ಲಿ ಹಂಡೆಡ್  ಪರ್ಸೆಂಟ್  ಹಿಂದುತ್ವವನ್ನು  ಪಕ್ಕಕ್ಕಿಟ್ಟು  ಸೆಕ್ಯುಲರ್  ಪಕ್ಷಗಳ   ಜೊತೆ  ರಾಜಿ  ಮಾಡಿಕೊಂಡು ಅಧಿಕಾರ ಉಳಿಸಿಕೊಳ್ಳುವುದು ಅನಿವಾರ್ಯವೂ ಆಗಲಿದೆ.

Related Posts

Leave a Reply

Your email address will not be published. Required fields are marked *