ಚೆನ್ನೈ: ಕೇಂದ್ರದ ಸರಕಾರದ ನೀತಿಗಳ ವಿರುದ್ಧ ಸಿಡಿದೆದ್ದಿರುವ ತಮಿಳುನಾಡು ಸರಕಾರವು ರಾಜ್ಯದ ಸ್ವಾಯತ್ತತೆಯನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟಿದೆ.
ತಮಿಳುನಾಡು ರಾಜ್ಯದ ಸ್ವಾಯತ್ತತೆ ಕುರಿತು ವರದಿ ನೀಡಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಕಟಿಸಿದ್ದಾರೆ.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಈ ಉನ್ನತ ಮಟ್ಟದ ಸಮಿತಿಯ ನೇತೃತ್ವ ವಹಿಸಲಿದ್ದಾರೆ.
ರಾಜ್ಯದ ಸ್ವಾಯತ್ತತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧವನ್ನು ಸಮಿತಿಯು ವಿವರವಾಗಿ ಪರಿಶೀಲಿಸಲಿದೆ ಹಾಗೂ ೨೦೨೬ರ ಜನವರಿಯಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ.
ಶಿಫಾರಸುಗಳೊಂದಿಗೆ ಅಂತಿಮ ವರದಿಯನ್ನು ಎರಡು ವರ್ಷಗಳಲ್ಲಿ ಸಲ್ಲಿಸಲಾಗುವುದು ಎಂದು ಸ್ಟಾಲಿನ್ ರಾಜ್ಯ ವಿಧಾನಸಭೆಗೆ ತಿಳಿಸಿದರು.
ಮಾಜಿ ಅಧಿಕಾರಿ ಅಶೋಕ್ ವರ್ಧನ್ ಶೆಟ್ಟಿ ಮತ್ತು ರಾಜ್ಯ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಎಂ.ನಾಗನಾಥನ್ ಸಮಿತಿಯ ಸದಸ್ಯರಾಗಿರುತ್ತಾರೆ. “ರಾಜ್ಯ ಪಟ್ಟಿಯಿಂದ ಸಮವರ್ತಿ ಪಟ್ಟಿಗೆ ವರ್ಗಾವಣೆಯಾದ ವಿಷಯಗಳನ್ನು ಮರಳಿ ವರ್ಗಾಯಿಸಲು ಸಮಿತಿಯು ಕಾನೂನಿನ ಪ್ರಕಾರ ಅಧ್ಯಯನ ಮಾಡಲಿದೆ” ಎಂದು ಮುಖ್ಯಮಂತ್ರಿ ಹೇಳಿದರು.
ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ ಅದನ್ನು ರಾಜ್ಯಗಳು ಮತ್ತು ಕೇಂದ್ರ ನಿರ್ವಹಿಸುತ್ತವೆ. ಆದರೆ ಇದು ಕೇವಲ ರಾಜ್ಯ ವಿಷಯವಾಗಿರಬೇಕು ಎಂದು ಸ್ಟಾಲಿನ್ ಒತ್ತಾಯಿಸಿದ್ದಾರೆ.
ಅಲ್ಲದೇ ಶಿಕ್ಷಣವನ್ನು ಸಮವರ್ತಿ ಪಟ್ಟಿಗೆ ವರ್ಗಾಯಿಸಿದ ಸಂವಿಧಾನದ ೪೨ ನೇ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳುವಂತೆ ಅವರು ಕೋರಿದ್ದಾರೆ. ೨ ಬಾರಿ ಅಂಗೀಕರಿಸಿದ ಮಸೂದೆ ತಿರಸ್ಕರಿಸಿದ್ದ ರಾಷ್ಟ್ರಪತಿ: ೧೨ನೇ ತರಗತಿಯ ಅಂಕಗಳ ಆಧಾರದಲ್ಲಿಯೇ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶದ ಅವಕಾಶ ನೀಡುವ, ತಮಿಳುನಾಡು ವಿಧಾನಸಭೆ ಎರಡು ಬಾರಿ ಅಂಗೀಕರಿಸಿದ ಮಸೂದೆಯನ್ನು ರಾಷ್ಟ್ರಪತಿ ತಿರಸ್ಕರಿಸಿದ ನಂತರ ನೀಟ್ ವಿವಾದ ಉಲ್ಬಣಗೊಂಡಿದೆ.
ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ರಾಜ್ಯಪಾಲರ ವಿರುದ್ಧ ಜಯ ಗಳಿಸಿತ್ತು. ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದಲ್ಲಿ ಸಿಎಂ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಿದೆ.
ಪ್ರಮುಖ ಮಸೂದೆಗಳಿಗೆ ಸಹಿ ಹಾಕದ ರಾಜ್ಯಪಾಲರ ನಡೆಯನ್ನು ಕೋರ್ಟ್ ಟೀಕಿಸಿ, ಇದು ’ಕಾನೂನುಬಾಹಿರ’ ಮತ್ತು ’ಅನಿಯಂತ್ರಿತ’ ಎಂದು ಹೇಳಿತ್ತು. ಅಷ್ಟೇ ಅಲ್ಲ ರಾಜ್ಯ ವಿಧಾನಸಭೆಗಳು ಅನುಮೋದನೆ ನೀಡುವ ಮಸೂದೆಗಳನ್ನು ತೀರ್ಮಾನ ಮಾಡಲು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ೩ ತಿಂಗಳ ಕಾಲಮಿತಿ ಹಾಕಿದೆ. ಈ ನಿಯಮ ಪ್ರಕಾರ ಇನ್ನು ಮುಂದೆ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸುವ ಬಗ್ಗೆ ಮೂರು ತಿಂಗಳೊಳಗೆ ತೀರ್ಮಾನ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ.