Menu

ಅತಿ ಹಿಂದುಳಿದ ‌2A ಪ್ರವರ್ಗದಲ್ಲಿ ಸಿಂಹಪಾಲು ಬೆಣ್ಣೆ ನುಂಗಿದ ಭೂಪರು ಯಾರು: ಸಚಿವ ಹೆಚ್‌ಡಿಕೆ  ಪ್ರಶ್ನೆ

ಜಾತಿ ಗಣತಿ ವರದಿಗೆ ರಾಜ್ಯದ ಉದ್ದಗಲಕ್ಕೂ ಆಕ್ರೋಶ ಭುಗಿಲೇಳುತ್ತಿರುವ ಬೆನ್ನಲ್ಲಿಯೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು 2A ಪ್ರವರ್ಗ ಸೌಲಭ್ಯ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ,  ಅತಿಹಿಂದುಳಿದ ‌2A ಪ್ರವರ್ಗದಲ್ಲಿ ಸಿಂಹಪಾಲು ಬೆಣ್ಣೆ ನುಂಗಿದ ಭೂಪರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಜಾತಿ ಗಣತಿ ರಾಜಕೀಯ ಫಸಲಿಗೆ ಹೊಂಚು ಹಾಕಿರುವ ಸಿದ್ದರಾಮಯ್ಯನವರೇ  ಸತ್ಯವನ್ನೇ ಹೇಳಿ ಎಂದು ಟಾಂಗ್ ಕೊಟ್ಟಿರುವ ಕೇಂದ್ರ ಸಚಿವರು,ಅತಿ ಹಿಂದುಳಿದ ‌2A ಪ್ರವರ್ಗದಲ್ಲಿ ಸಿಂಹಪಾಲು ಬೆಣ್ಣೆ ನುಂಗಿದ ಭೂಪರು ಯಾರು,  ಕಿರುಬೆರಳ ತುದಿಯಲ್ಲೇ ದತ್ತಾಂಶವಿದೆ. ನೀವು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ,  ಸತ್ಯಮೇವ ಜಯತೇ ಎಂದು ಕುಟುಕಿದ್ದಾರೆ.

ನಿಮಗೂ ಗೊತ್ತು. 2A ಪ್ರವರ್ಗದಲ್ಲಿ 101 ಜಾತಿಗಳಿವೆ, 15% ಮೀಸಲು ಪಾಲು ಇದೆ. ಈ ಪಾಲಿನಲ್ಲಿ ಅತಿಹೆಚ್ಚು ಪಾಲು ನುಂಗಿದವರು ಯಾರು ದೇವ್ರು..? ಈ ನುಂಗುವಿಕೆಯಲ್ಲಿಯೂ ನಿಮ್ಮ ಪಾತ್ರವೇನು ಸ್ವಾಮೀ..? ಸತ್ಯ ಹೇಳಿ ಎಂದು ಕೇಂದ್ರ ಸಚಿವರು ಕೇಳಿದ್ದಾರೆ.

ಕಳೆದ 15-20 ವರ್ಷಗಳಲ್ಲಿ A B C D ಗ್ರೂಪ್ ಗಳಲ್ಲಿ ನಡೆದಿರುವ ನೇಮಕಾತಿ, ವೃತ್ತಿಪರ ಕೋರ್ಸ್‌ ಪ್ರವೇಶ, ಇನ್ನಿತರ ಎಲ್ಲಾ ಸೌಲಭ್ಯಗಳ ಅಂಕಿ ಅಂಶ ಸುಳ್ಳು ಹೇಳುವುದಿಲ್ಲ,  ಎಂದಿರುವ ಕುಮಾರಸ್ವಾಮಿ,  ವೃತ್ತಿಪರ ಕೋರ್ಸ್‌; ಅಂದರೆ ಮೆಡಿಕಲ್, ಡೆಂಟಲ್, ಎಂಜಿನಿಯರಿಂಗ್, ಡಿ ಫಾರ್ಮ, ಬಿ ಫಾರ್ಮ, ಕೃಷಿ ಇತ್ಯಾದಿ ವಿಭಾಗಗಳಲ್ಲಿ 2A ಪ್ರವರ್ಗದ ನೂರೊಂದು ಜಾತಿಗಳಲ್ಲಿ ಯಾವ್ಯಾವ ಜಾತಿಯ ಎಷ್ಟೆಷ್ಟು ಮಕ್ಕಳಿಗೆ ಪ್ರವೇಶ ಸಿಕ್ಕಿದೆ. ಇಲ್ಲಿಯೂ ಸಿಂಹಪಾಲು ಪ್ರವೇಶ, ಲಾಭ ದಕ್ಕಿದ್ದು ಯಾರಿಗೆ,  ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿ CET ಸಮಗ್ರ ದತ್ತಾಂಶ ಲಭ್ಯವಿದೆ, ತಾವು ತರಿಸಿ ನೋಡಬಹುದು ಎಂದು ಹೇಳಿದ್ದಾರೆ.

2A ಪ್ರವರ್ಗದ ನೂರೊಂದು ಸಮಾಜಗಳಲ್ಲಿ  ನನ್ನ ಮನವಿ ಇಷ್ಟೇ,  ಒಕ್ಕಲಿಗರು, ವೀರಶೈವ ಲಿಂಗಾಯತರ ಕಡೆ ಬೆರಳು ತೋರಿಸಿ ನಿಮ್ಮ ಮೂಗಿಗೆ ಬೆಣ್ಣೆ ಕೊಸರು ಸವರುತ್ತಿದ್ದಾರೆ.  ನಿಮ್ಮ ನ್ಯಾಯಯುತ ಪಾಲಿನಲ್ಲಿ ಸಿಂಹಪಾಲು ಕಬಳಿಸಿದ್ದು ಯಾರೆಂದು ನಿಮಗೂ ಚೆನ್ನಾಗಿ ಗೊತ್ತು,  ಆದರೂ ಸುಮ್ಮನಿದ್ದೀರಿ, ಯಾಕೆ ನಿಮ್ಮ ಎದುರು ನಿಂತು ಲಿಂಗಾಯಿತರು, ಒಕ್ಕಲಿಗರನ್ನು ಬೈದರೇ ನಿಮ್ಮ ಹೊಟ್ಟೆ ತುಂಬುವುದೇ,  ನಿಮ್ಮ ಮಕ್ಕಳಿಗೆ ನ್ಯಾಯ ಸಿಗುವುದೇ ಎಂದು ಪ್ರಶ್ನಿಸಿದ್ದಾರೆ.

ಅತಿ ಹಿಂದುಳಿದ 2A ಪ್ರವರ್ಗದಲ್ಲಿ ಅತೀ ಹೆಚ್ಚು ಪಾಲು ಬೆಣ್ಣೆ ತಿಂದವರು ಯಾರು, ಈಗಲಾದರೂ ಸತ್ಯ ಹೇಳಿ ಸಿದ್ದರಾಮಯ್ಯನವರೇ,  ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ. ಸತ್ಯಮೇವ ಜಯತೇ,ಸತ್ಯಕ್ಕೆ ಜಯವಾಗಲಿ ಎಂದು  ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *