ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾಧ್ರಾ ಗಾಂಧಿ ಅವರ ಪತಿ ಹಾಗೂ ಉದ್ಯಮಿ ರಾಬಾರ್ಟ್ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
2008ರಲ್ಲಿ ಹರಿಯಾಣದಲ್ಲಿ 7.5 ಕೋಟಿ ರೂ.ಗೆ ಖರೀದಿಸಿದ ಭೂಮಿಯನ್ನು 50 ಕೋಟಿ ರೂ.ಗೆ ಮಾರಾಟ ಮಾಡಿದ ಪ್ರಕರಣದಲ್ಲಿ ರಾಬರ್ಟ್ ವಾದ್ರಾ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದು, ಜಾರಿ ನಿರ್ದೇಶನಾಯಲ ಮಂಗಳವಾರ ಸುದೀರ್ಘ ವಿಚಾರಣೆ ನಡೆಸಿತು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿದ ಬೆನ್ನಲ್ಲೇ ರಾಬರ್ಟ್ ವಾದ್ರಾ ಅವರನ್ನು ವಿಚಾರಣೆಗೊಳಪಡಿಸಿದೆ. ಮೊದಲ ಬಾರಿಯ ಸಮನ್ಸ್ ಗೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಡಿ ಮಂಗಳವಾರ ಎರಡನೇ ಬಾರಿ ಸಮನ್ಸ್ ಜಾರಿಗೊಳಿಸಿತ್ತು.
ಮಂಗಳವಾರ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾದ ರಾಬರ್ಟ್ ವಾದ್ರಾ ಅವರನ್ನು ಸಂಜೆ 6 ಗಂಟೆಯವರೆಗೆ ವಿಚಾರಣೆಗೊಳಪಡಿಸಲಾಗಿದ್ದು, ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
56 ವರ್ಷದ ರಾಬರ್ಟ್ ವಾದ್ರಾ ಸುಮಾರು 20 ವರ್ಷಗಳ ಹಿಂದಿನ ಪ್ರಕರಣದಲ್ಲಿ ಪದೇಪದೆ ವಿಚಾರಣೆ ನೆಪದಲ್ಲಿ ಜಾರಿ ನಿರ್ದೇಶನಾಲಯ ರಾಜಕೀಯ ಮಾಡುತ್ತಿದೆ. ಇದು ಬಿಜೆಪಿಯ ರಾಜಕೀಯ ಸಿದ್ಧಾಂತಕ್ಕೆ ಸಾಕ್ಷಿಯಾಗಿದೆ. ಮುಗಿದು ಹೋದ ಪ್ರಕರಣವನ್ನು ಪದೇಪದೆ ಕೆದಲಕುತ್ತಿದೆ ಎಂದು ಆರೋಪಿಸಿದ್ದಾರೆ.
ತನಿಖಾ ಸಂಸ್ಥೆಗಳಿಗೆ ಒಂದು ಪ್ರಕರಣದ ತನಿಖೆ ಮುಗಿಸಲು ಹಾಗೂ ಸೂಕ್ತ ಸಾಕ್ಷಿ ಸಂಗ್ರಹಿಸಲು 20 ವರ್ಷ ಸಾಕಾಗುವುದಿಲ್ಲವೇ? ನಾನು ಯಾವಾಗ ಅಲ್ಪಸಂಖ್ಯಾತರು ಮತ್ತು ಬಡವರ ಪರ ಧ್ವನಿ ಎತ್ತುತ್ತೇನೆ. ಆಗೆಲ್ಲಾ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ಮುಂದಿಟ್ಟುಕೊಂಡು ತನಿಖೆ ನೆಪದಲ್ಲಿ ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿವೆ ಎಂದು ಅವರು ಆರೋಪಿಸಿದರು.