ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಮುಡಾ ಹಗರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಕುರಿತ ಆದೇಶ ಸದ್ಯಕ್ಕಿಲ್ಲ. ತನಿಖೆ ಮುಂದುವರಿಸುವಂತೆ ಸೂಚನೆ ನೀಡಿದೆ.
ಲೋಕಾಯುಕ್ತ ಪೊಲೀಸರಿಗೆ ನ್ಯಾ. ಸಂತೋಷ್ ಗಜಾನನ ಭಟ್ ಅವರಿದ್ದ ಪೀಠವು ಈ ನಿರ್ದೇಶನವನ್ನು ನೀಡಿದೆ. ಜಾರಿ ನಿರ್ದೇಶನಾಲಯ ತಕರಾರು ಅರ್ಜಿ ಸಲ್ಲಿಸಬಹುದು. ಲೋಕಾಯುಕ್ತ ಪೊಲೀಸರ ಅಂತಿಮ ವರದಿ ಬಳಿಕವೇ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಲೋಕಾಯುಕ್ತ ಪೊಲೀಸರು ತನಿಖೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲು ಸೂಚನೆ ನೀಡಲಾಗಿದೆ ಎಂದ ಕೋರ್ಟ್ ಮೇ 7 ಕ್ಕೆ ವಿಚಾರಣೆ ಮುಂದೂಡಿದೆ.
ಲೋಕಾಯುಕ್ತ ಅಧಿಕಾರಿಗಳು ಸಿಎಂ ಕುಟುಂಬವನ್ನು ರಕ್ಷಣೆ ಮಾಡಲು ತನಿಖೆ ಪೂರ್ಣಗೊಳಿಸದೆ ವರದಿ ಸಲ್ಲಿಕೆ ಮಾಡಿದ್ದಾರೆ. ತನಿಖಾಧಿಕಾರಿಗಳಿಗೆ ತನಿಖೆಯ ಬಗ್ಗೆ ತಿಳಿದಿಲ್ಲ. ನ್ಯಾಯಾಲದ ಇಂದಿನ ಆದೇಶ ಸರ್ಕಾರಕ್ಕೆ ಛೀಮಾರಿ ಹಾಕಿದಂತಾಗಿದೆ. ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗ ಪಡಿಸಿಕೊಂಡು ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಸಲು ಅವಕಾಶ ನೀಡುವುದಿಲ್ಲ, ದಾಖಲೆ ಇಟ್ಟುಕೊಂಡು ಸಿಎಂಗೆ ಶಿಕ್ಷೆ ಕೊಡಿಸುವುದಾಗಿ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.