Menu

ಎಐ, ಕ್ವಾಂಟಂ, ಸೈಬರ್ ಸೆಕ್ಯುರಿಟಿ ಸಹಕಾರಕ್ಕೆ ಬವೇರಿಯಾ ಜತೆ ರಾಜ್ಯದ ಒಡಂಬಡಿಕೆ

ಎಐ, ಕ್ವಾಂಟಂ ತಂತ್ರಜ್ಞಾನ, ಬಿಟಿ, ಸ್ಮಾರ್ಟ್ ಸಿಟಿ, ಉನ್ನತ ಶಿಕ್ಷಣ ಮತ್ತು ಸುಸ್ಥಿರ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಉದ್ದೇಶದಿಂದ ಜರ್ಮನಿಯ ಬವೇರಿಯಾ ಪ್ರಾಂತ್ಯ ಮತ್ತು ರಾಜ್ಯ ಸರಕಾರಗಳು  ಒಡಂಬಡಿಕೆಗೆ ಅಂಕಿತ ಹಾಕಿದವು.

ರಾಜ್ಯ ಸರಕಾರದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಬವೇರಿಯಾ ಪರವಾಗಿ ಅಲ್ಲಿಯ ಚಾನ್ಸಲರಿ ಮುಖ್ಯಸ್ಥ ಡಾ.ಪ್ಲೋರಿಯನ್ ಹರ್ಮನ್ ಬೆಂಗಳೂರಿನಲ್ಲಿ  ಸಹಿ ಹಾಕಿದರು. ಈ ಸಂದರ್ಭದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪಾಟೀಲ, `ಈ ಒಡಂಬಡಿಕೆಯು ಮುಂದಿನ 5 ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಇದರ ಅನ್ವಯ ಇಂಡಸ್ಟ್ರಿ 4.0, ವೈಮಾಂತರಿಕ್ಷ, ವೈದ್ಯಕೀಯ ತಂತ್ರಜ್ಞಾನ, ಪರಿಸರ ತಂತ್ರಜ್ಞಾನ, ನಗರ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಮತ್ತು ನೇಮಕ, ಉದ್ಯಮಶೀಲತೆ, ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲೂ ಪರಸ್ಪರ ಸಹಕಾರ ಸ್ಥಾಪನೆಯಾಗಲಿದೆ’ ಎಂದಿದ್ದಾರೆ.

ಬವೇರಿಯಾದ ಸಚಿವರಿಗೆ ರಾಜ್ಯದ ಕೈಗಾರಿಕಾ ಕಾರ್ಯಪರಿಸರದ ಬಗ್ಗೆ ಸಾದ್ಯಂತವಾಗಿ ತಿಳಿಸಿ, ಹೂಡಿಕೆಗೆ ಅವಕಾಶವಿರುವ ಕ್ಷೇತ್ರಗಳತ್ತ ಗಮನ ಸೆಳೆಯಲಾಯಿತು. ಜತೆಗೆ ಕೌಶಲ್ಯಾಭಿವೃದ್ಧಿಯಂಥ ನಿರ್ದಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವರ್ಕಿಂಗ್ ಗ್ರೂಪ್ ರಚಿಸುವ ಬಗ್ಗೆ ತೀರ್ಮಾನಿಸಲಾಯಿತು. ಬವೇರಿಯಾ ಪ್ರಾಂತ್ಯವು 2007ರಿಂದಲೂ ರಾಜ್ಯದೊಂದಿಗೆ ವಾಣಿಜ್ಯ ಸಂಬಂಧವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಬವೇರಿಯಾ ಪ್ರಾಂತೀಯ ಸರಕಾರದ ಪ್ರತಿನಿಧಿ ಮಟ್ಟದ ಕಚೇರಿ 2001ರಿಂದಲೂ ಕಾರ್ಯ ನಿರ್ವಹಿಸುತ್ತಿದೆ. ಈಗಿನ ಹೊಸ ಒಡಂಬಡಿಕೆಯಿಂದ ರಾಜ್ಯ ಮತ್ತು ಬವೇರಿಯಾ ನಡುವಿನ ಬಾಂಧವ್ಯ ಮತ್ತೊಂದು ಮಜಲನ್ನು ಕಾಣಲಿದೆ. ವಿಜ್ಞಾನ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ 2013ರಿಂದಲೂ ದ್ವಿಪಕ್ಷೀಯ ಸಹಕಾರವಿದೆ. ಇನ್ನು ಮುಂದೆ ಬಾಹ್ಯಾಕಾಶ, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ವಲಯಗಳ ಬಗ್ಗೆ ಗಮನ ಹರಿಸಲು ಹೆಚ್ಚಿನ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, `ರಾಜ್ಯದ ಐಟಿ-ಬಿಟಿ ಇಲಾಖೆಯು ನವೋದ್ಯಮ ಕ್ಷೇತ್ರದಲ್ಲಿ ಜರ್ಮನಿಯೊಂದಿಗೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸಂಶೋಧನೆ, ಯೂನಿಕಾರ್ನ್ ಶ್ರೇಣಿಯ ನವೋದ್ಯಮಗಳು ಸಮೃದ್ಧವಾಗಿವೆ. ಯಾವುದಾದರೂ ವಲಯದಲ್ಲಿ ರಾಜ್ಯದ ಯುವಜನರು ಜರ್ಮನ್ ಭಾಷೆ ಕಲಿಯುವುದು ಅಗತ್ಯವೆನಿಸಿದರೆ ಅದಕ್ಕೂ ವ್ಯವಸ್ಥೆ ಮಾಡಲಾಗುವುದು. ಬವೇರಿಯಾ ಪ್ರಾಂತೀಯ ಸರಕಾರವು ಈ ಬಗ್ಗೆ ನಮ್ಮ ಗಮನಕ್ಕೆ ತರಬಹುದು’ ಎಂದಿದ್ದಾರೆ.

ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಸತ್ಯವತಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Related Posts

Leave a Reply

Your email address will not be published. Required fields are marked *