ಲಕ್ನೊ: ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತವರಿನಲ್ಲಿ 5 ವಿಕೆಟ್ ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಧೋನಿ ನಾಯಕನಾಗಿ ಮರಳಿದ ಬೆನ್ನಲ್ಲೇ ಐಪಿಎಲ್ ನಲ್ಲಿ ಗೆಲುವಿನ ಹಾದಿ ಕಂಡುಕೊಂಡಿದೆ.
ಲಕ್ನೋದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 19.3 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಪೈಪೋಟಿ ಮೊತ್ತ ಬೆಂಬತ್ತಿದ ಸಿಎಸ್ ಕೆಗೆ ಶೇಖ್ ರಶೀದ್ ಮತ್ತು ರಚಿನ್ ರವೀಂದ್ರ ಮೊದಲ ವಿಕೆಟ್ ಗೆ 52 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ಈ ಪಂದ್ಯದಿಂದ ಐಪಿಎಲ್ ಗೆ ಪಾದರ್ಪಣೆ ಮಾಡಿದ ಶೇಖ್ ರಶೀದ್ 19 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 27 ರನ್ ಬಾರಿಸಿದರೆ, ರಚಿನ್ ರವೀಂದ್ರ 22 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 37 ರನ್ ಬಾರಿಸಿ ಔಟಾದರು.
ಆರಂಭಿಕರು ಪೆವಿಲಿಯನ್ ಸೇರುತ್ತಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಅನುಭವಿಸಿದ್ದರಿಂದ ತಂಡ ಒತ್ತಡಕ್ಕೆ ಸಿಲುಕಿತು. ರಾಹುಲ್ ತ್ರಿಪಾಠಿ (9), ಜಡೇಜಾ (7), ವಿಜಯ್ ಶಂಕರ್ (9) ನಿರಾಸೆ ಮೂಡಿಸಿದರು.
ಸಿಎಸ್ ಕೆಗೆ 30 ಎಸೆತಗಳಲ್ಲಿ 54 ರನ್ ಗಳಿಸಬೇಕಾದ ಒತ್ತಡದಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಧೋನಿ ಮತ್ತು ಶಿವಂ ದುಬೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಧೋನಿ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 26 ರನ್ ಬಾರಿಸಿದರೆ, ದುಬೆ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 43 ರನ್ ಗಳಿಸಿದರು.
ಲಕ್ನೋ ಪರ ರವಿ ಬಿಶ್ನೋಯಿ 2 ವಿಕೆಟ್ ಪಡೆದರೆ ಉಳಿದ ಬೌಲರ್ ಗಳು ತಲಾ 1 ವಿಕೆಟ್ ಪಡೆದರು. ಆದರೆ ಧೋನಿ ಸೇರಿದಂತೆ ಸಿಎಸ್ ಕೆ ಆಟಗಾರರಿಗೆ ಹಲವು ಜೀವದಾನ ನೀಡಿದ ಲಕ್ನೋ ಆಟಗಾರರು ಗೆಲುವಿನ ಅವಕಾಶ ಕೈಚೆಲ್ಲಿದರು.
ಪಂತ್ ಶತಕದ ಬಲ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಸಿಡಿಸಿದ ಈ ಆವೃತ್ತಿಯ ಮೊದಲ ಅರ್ಧಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಲಕ್ನೋ ಆರಂಭದಲ್ಲೇ ಭರ್ಜರಿ ಫಾರ್ಮ್ ನಲ್ಲಿರುವ ಏಡಿಯನ್ ಮರ್ಕರಂ (6) ಮತ್ತು ನಿಕೊಲಸ್ ಪೂರನ್ (8) ಅಲ್ಪ ಮೊತ್ತಕ್ಕೆ ನಿರ್ಗಮಿಸಿದ್ದರಿಂದ ಆಘಾತಕ್ಕೆ ಒಳಗಾಯಿತು.
ಮೂರನೇ ಕ್ರಮಾಂಕದಲ್ಲಿ ಮಿಚೆಲ್ ಮಾರ್ಷ್ ಮತ್ತು ರಿಷಭ್ ಪಂತ್ 50 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಮಾರ್ಷ್ 25 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 30 ರನ್ ಬಾರಿಸಿ ಔಟಾದರೆ, ಪಂತ್ 49 ಎಸೆತಗಳಲ್ಲಿ 4 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ ಸಿಡಿಸಿ 63 ರನ್ ಗಳಿಸಿದರು.
ಕೆಳ ಕ್ರಮಾಂಕದಲ್ಲಿ ಆಯುಷ್ ಬದೋನಿ (22) ಮತ್ತು ಅಬ್ದುಲ್ ಸಮದ್ (22) ಉತ್ತಮ ಕಾಣಿಕೆ ನೀಡಿದರು. ಚೆನ್ನೈ ಪರ ರವೀಂದ್ರ ಜಡೇಜಾ ಮತ್ತು ಮಹೇಶ್ ಪತಿರಾಣ ತಲಾ 2 ವಿಕೆಟ್ ಪಡೆದು ಮಿಂಚಿದರು.