ಹೈದರಾಬಾದ್: ಆರಂಭಿಕ ಅಭಿಷೇಕ್ ಶರ್ಮ ಸಿಡಿಸಿದ ಊಹೆಗೂ ನಿಲುಕದ ಸಿಡಿಲಬ್ಬರದ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ನಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಗೆಲುವಿನ ಹಾದಿಗೆ ಮರಳಿದೆ.
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 6 ವಿಕೆಟ್ ಗೆ 246 ರನ್ ಪೇರಿಸಿದರೆ, ಸನ್ ರೈಸರ್ಸ್ ಹೈದರಾಬಾದ್ 18.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಸತತ 4 ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಎಸ್ ಆರ್ ಎಚ್ ತಂಡ ಅತೀ ದೊಡ್ಡ ಮೊತ್ತದ ಚೇಸ್ ಮಾಡಿದ ದಾಖಲೆಯೊಂದಿಗೆ ಗೆಲುವಿನ ಹಾದಿಗೆ ಮರಳಿದೆ. ಇದಕ್ಕೂ ಮುನ್ನ ಎಸ್ ಆರ್ ಎಚ್ ಇದೇ ತಂಡದ ವಿರುದ್ಧ 215 ರನ್ ಯಶಸ್ವಿಯಾಗಿ ಚೇಸ್ ಮಾಡಿದ ದಾಖಲೆ ಹೊಂದಿದೆ.
ಅಸಾಧ್ಯ ಗುರಿ ಯಶಸ್ವಿಯಾಗಿ ಬೆಂಬತ್ತಲು ಅಭಿಷೇಕ್ ಶರ್ಮ ಸಿಡಿಲಬ್ಬರದ ಶತಕ ಪ್ರಮುಖ ಆಕರ್ಷಣೆಯಾಗಿದ್ದು, 18ನೇ ಆವೃತ್ತಿಯ ಐಪಿಎಲ್ ನಲ್ಲಿ ಬಂದ ಎರಡನೇ ಶತಕವಾಗಿದೆ. ಅಭಿಷೇನ್ 1 ಎಸೆತದಿಂದ ಪ್ರಿಯಾಂಶ್ ಅತೀ ವೇಗದ ಶತಕದ ದಾಖಲೆ ಸರಿಗಟ್ಟುವ ಅವಕಾಶದಿಂದ ವಂಚಿತರಾದರು.
ಅಭಿಷೇಕ್ ಶರ್ಮ 40 ಎಸೆತಗಳಲ್ಲಿ ಪೂರೈಸಿದರು. ಆದರೆ ಇಲ್ಲಿಗೆ ತಮ್ಮ ಬ್ಯಾಟಿಂಗ್ ಅಬ್ಬರ ನಿಲ್ಲಿಸದೇ 55 ಎಸೆತಗಳಲ್ಲಿ 14 ಬೌಂಡರಿ ಮತ್ತು 10 ಆಕಾಶದೆತ್ತರದ ಸಿಕ್ಸರ್ ಗಳ ಸಹಾಯದಿಂದ 141 ರನ್ ಸಿಡಿಸಿದರು.
ಅಭಿಷೇಕ್ ಶರ್ಮ ಮತ್ತು ಟ್ರಾವಿಸ್ ಹೆಡ್ ಮೊದಲ ವಿಕೆಟ್ ಗೆ 171 ರನ್ ಜೊತೆಯಾಟದಿಂದ ಗೆಲುವು ಖಚಿತಪಡಿಸಿದರು. ಹೆಡ್ 37 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 66 ರನ್ ಚಚ್ಚಿದರು. ನಂತರ ಬಂದ ಹೆನ್ರಿಚ್ ಕ್ಲಾಸೆನ್ 21 ರನ್ ಸಿಡಿಸಿ ಗೆಲುವಿನ ಔಪಚಾರಿಕತೆ ಪೂರೈಸಿದರು.
ಅಯ್ಯರ್ ಅಬ್ಬರ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ತಂಡ ನಾಯಕ ಶ್ರೇಯಸ್ ಅಯ್ಯರ್ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು. ಅಯ್ಯರ್ 36 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 82 ರನ್ ಬಾರಿಸಿ ಔಟಾದರು.
ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ ಪ್ರಿಯಾಂಶ್ ಆರ್ಯ (36) ಮತ್ತು ಪ್ರಭಾಸಿಮ್ರಾನ್ ಸಿಂಗ್ (42) ಮೊದಲ ವಿಕೆಟ್ ಗೆ 66 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ಕೊನೆಯಲ್ಲಿ ಸ್ಟೋನಿಸಿಸ್ ಕೊನೆಯ 4 ಎಸೆತಗಳಲ್ಲಿ ಸತತ 4 ಸಿಕ್ಸರ್ ಸೇರಿದಂತೆ 11 ಎಸೆತಗಳಲ್ಲಿ 1 ಬೌಂಡರಿ ಒಳಗೊಂಡ 34 ರನ್ ಬಾರಿಸಿ ಬೃಹತ್ ಮೊತ್ತ ಪೇರಿಸಲು ನೆರವಾದರು.