ಅಮೆರಿಕದಿಂದ ಗಡಿಪಾರು ಆಗಿರುವ 2008ರ ಮುಂಬೈ ತಾಜ್ ಹೋಟೆಲ್ ಮೇಲಿನ ಉಗ್ರ ದಾಳಿಯ ಆರೋಪಿ ತಹವ್ವುರ್ ರಾಣಾ ಹೊತ್ತ ವಿಮಾನ ಇಂದು (ಏಪ್ರಿಲ್ 10) ಮಧ್ಯಾಹ್ನ ಭಾರತ ತಲುಪಲಿದೆ.
ಭಾರತಕ್ಕೆ ತನ್ನನ್ನು ಹಸ್ತಾಂತರ ಬೇಡ ಎಂದು ಕೋರಿ ತಹವ್ವೂರ್ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಾರತಕ್ಕೆ ಕರೆತರುತ್ತಿದೆ.
ತಹವ್ವುರ್ ರಾಣಾನನ್ನು ಹೊತ್ತ ಅಮೆರಿಕದ ವಿಶೇಷ ವಿಮಾನ ಭಾರತದ ಕಡೆ ಪ್ರಯಾಣ ಆರಂಭಿಸಿದ್ದು, ಮಧ್ಯಾಹ್ನ ಬಂದಿಳಿಯಲಿದೆ. ದೆಹಲಿಗೆ ಕರೆತರಲಾಗು ತ್ತದೆಯೇ ಅಥವಾ ಮುಂಬೈಗೆ ಕರೆತರಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ರಾಣಾ ಆರಂಭಿಕ ಕೆಲವು ವಾರಗಳನ್ನು ಎನ್ಐಎ ಕಸ್ಟಡಿಯಲ್ಲಿ ಕಳೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.
2008 ರ ಮುಂಬೈ ದಾಳಿಯಲ್ಲಿ ರಾಣಾ ಆರೋಪಿ, ಇದರಲ್ಲಿ 157 ಜನರು ಸಾವನ್ನಪ್ಪಿದ್ದರು. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯುವ ಆತನ ಮನವಿಯನ್ನು ಅಮೆರಿಕ ನ್ಯಾಯಾಲಯ ತಿರಸ್ಕರಿಸಿತ್ತು. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರ ಮುಂದೆ ಮಂಡಿಸಲಾಗಿತ್ತು.
ಕಳೆದ ಫೆಬ್ರವರಿ 27 ರಂದು ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಗೆ ತಡೆ ನೀಡಲು ತುರ್ತು ಅರ್ಜಿಯನ್ನು ಯುಎಸ್ ಸುಪ್ರೀಂ ಕೋರ್ಟ್‌ನ ಅಸೋಸಿಯೇಟ್ ನ್ಯಾಯಮೂರ್ತಿ ಮತ್ತು ಒಂಬತ್ತನೇ ಸರ್ಕ್ಯೂಟ್ ನ್ಯಾಯಮೂರ್ತಿ ಎಲೆನಾ ಕಗನ್ ಅವರ ಮುಂದೆ ಸಲ್ಲಿಸಲಾಯಿತು.
ರಾಣಾ ಫೆಬ್ರವರಿ 13 ರಂದು ಸಲ್ಲಿಸಿದ ಅರ್ಜಿಯ ಅರ್ಹತೆಯ ಮೇಲಿನ ಮೊಕದ್ದಮೆ ಪೂರ್ಣಗೊಳ್ಳುವವರೆಗೆ ತನ್ನ ಹಸ್ತಾಂತರಕ್ಕೆ ತಡೆ ನೀಡುವಂತೆ ಮತ್ತು ಭಾರತದ ಮುಂದೆ ಶರಣಾಗುವಂತೆ ಕೋರಿದ್ದ. ಭಾರತದಲ್ಲಿ ತನಗೆ ಚಿತ್ರಹಿಂಸೆಯ ಅಪಾಯವಿರುವುದರಿಂದ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದು ಅಮೆರಿಕದ ಕಾನೂನು ಮತ್ತು ಚಿತ್ರಹಿಂಸೆ ವಿರುದ್ಧದ ವಿಶ್ವಸಂಸ್ಥೆಯ ಸಮಾವೇಶದ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದ.
ಆದರೆ ನ್ಯಾಯಾಲಯ ಈ ವಾದಗಳನ್ನು ಒಪ್ಪದ ಕಾರಣ ರಾಣಾ ಹಸ್ತಾಂತರಕ್ಕೆ ಅಗತ್ಯವಾದ ಔಪಚಾರಿಕ ಪ್ರಕ್ರಿಯೆ ಪೂರ್ಣಗೊಳಿಸಲು ಅಮೆರಿಕದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಭಾರತ ಮಾರ್ಚ್ 7 ರಂದು ಹೇಳಿತ್ತು.
ಕಳೆದ ತಿಂಗಳು ವಾಷಿಂಗ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಣಾ ಗಡಿಪಾರಿಗೆ ಅನು ಮೋದನೆ ನೀಡಿದ್ದಾರೆ. ಭಾರತವು ಜೂನ್ 2020 ರಲ್ಲಿ ರಾಣಾ ತಾತ್ಕಾಲಿಕ ಬಂಧನಕ್ಕೆ ಔಪಚಾರಿಕವಾಗಿ ವಿನಂತಿಸಿತು, ಹಸ್ತಾಂತರಕ್ಕಾಗಿ ಕಾನೂನು ಪ್ರಕ್ರಿಯೆ ಯನ್ನು ಪ್ರಾರಂಭಿಸಿತು.