ಬೆಂಗಳೂರು: ರಾಜ್ಯದ ವಿವಿಧೆಡೆ ಮಾರಾಟವಾಗುವ ಬಾಟಲಿ ನೀರು, ತುಪ್ಪ, ಪನ್ನೀರ್, ಹಸಿರು ಬಟಾಣಿಗಳು ಅಸುರಕ್ಷಿತ ಎಂದು ಆರೋಗ್ಯ ಇಲಾಖೆ ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ವಿವಿಧೆಡೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸಿದ ಮಾದರಿಗಳ ವರದಿ ಬಂದಿದ್ದು, ಇನ್ನು ಕೆಲವು ಆಹಾರಗಳ ಮಾದರಿಗಳ ವರದಿ ನಿರೀಕ್ಷಿಸಲಾಗುತ್ತಿದೆ ಎಂದರು.
ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕಂಪನಿಗಳ 296 ಕುಡಿಯುವ ನೀರಿನ ಬಾಟಲಿಗಳ ಮಾದರಿ ಸಂಗ್ರಹಿಸಲಾಗಿದ್ದು, ಇದರಲ್ಲಿ 72 ಮಾದರಿಗಳು ಸುರಕ್ಷಿತ ಎಂದು ದೃಢಪಟ್ಟಿದೆ. 95 ಮಾದರಿಗಳು ಅಸುರಕ್ಷಿತವಾಗಿದ್ದು, 88 ಮಾದರಿ ನೀರು ಕಳಪೆ ಗುಣಮಟ್ಟದ್ದಾಗಿದೆ ಎಂದು ಅವರು ಹೇಳಿದರು.
ಬಾಟಲಿಯಲ್ಲಿ ನೀರು ಮಾರಾಟವಾಗುವ ಕಂಪನಿಗಳಿಗೆ ನೋಟಿಸ್ ನೀಡಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. ಕುಡಿಯುವ ನೀರಿನಲ್ಲಿ ಕೆಲವು ಕಂಪನಿಗಳ ಬಾಟಲಿಯಲ್ಲಿ ಶುದ್ಧತೆ ಕಾಪಾಡಿಲ್ಲ. ಕೆಲವು ಕಂಪನಿಗಳ ಬಾಟಲಿಯಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದರು.
ಇದೇ ವೇಳೆ ಕುಡಿಯುವ ನೀರು ಹಾಗೂ ಹಸಿರು ಬಟಾಣಿಯಲ್ಲಿ ನಿಷೇಧಿಸಲಾದ ಕಲರ್, ಅರ್ಸೆನಿಕ್ ಸೇರಿದಂತೆ ಹಲವು ರಾಸಾಯನಿಕ ಅಂಶಗಳು ದೊಡ್ಡ ಪ್ರಮಾಣದಲ್ಲಿ ಇರುವುದು ಪತ್ತೆಯಾಗಿದೆ ಎಂದರು.
ತುಪ್ಪದ 49 ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ 6 ವರದಿಗಳು ಬಂದಿದ್ದು ಎಲ್ಲಾ 6 ಮಾದರಿಗಳು ಅಸುರಕ್ಷಿತ ಎಂದು ದೃಢಪಟ್ಟಿದೆ.
ರಾಜ್ಯದಲ್ಲಿ ಮಾರಾಟವಾಗುವ 92 ಮಾದರಿಯ ಐಸ್ ಕ್ರೀಂಗಳನ್ನು ಪರಿಶೀಲನೆಗೆ ಕಳುಹಿಸಲಾಗಿದ್ದು, ಐಸ್ ಕ್ರೀಂ ಘಟಕಗಳಲ್ಲಿ ಶುದ್ಧತೆ ಕಾಪಾಡಿಕೊಳ್ಳದೇ ಇರುವುದು ಹಾಗೂ 6 ಐಸ್ ಕ್ರೀಂ ಮಾದರಿಗಳಲ್ಲಿ ರಾಸಾಯನಿಕ ಪತ್ತೆಯಾಗಿದೆ. ಈ ಕಂಪನಿಗಳ ಮೇಲೆ 38 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.
2078 ಔಷಧ ಮಳಿಗೆಗಳ ಮೇಲೆ ದಾಳಿ ಮಾಡಿ ಪರಿವೀಕ್ಷಣೆ ಮಾಡಲಾಗಿದ್ದು, 1872 ಔಷಧಗಳು ಸುರಕ್ಷಿತ ಹಾಗೂ 215 ಔಷಧ ಕಂಪನಿಗಳ ಉತ್ಪನ್ನಗಳು ಅಸುರಕ್ಷಿತ ಎಂದು ತಿಳಿದು ಬಂದಿದ್ದು, ಈ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
231 ಪನ್ನೀರ್ ಮಾದರಿಗಳಲ್ಲಿ 2 ಮಾದರಿಗಳು ಅಸುರಕ್ಷಿತ ಹಾಗೂ 30 ಮಾದರಿಗಳು ಸುರಕ್ಷಿತ ಎಂದು ದೃಢಪಟ್ಟಿದೆ. ಹಸಿರು ಬಟಾಣಿಯ 115 ಮಾದರಿಗಳನ್ನು ಪರೀಕ್ಷಿಸಲಾಗಿದ್ಉದ, 46 ಸುರಕ್ಷಿತ, 68 ಅಸುರಕ್ಷಿತ ಎಂದು ದೃಢಪಟ್ಟಿದೆ. ಬಾಟಲಿ ನೀರಿನ ನಂತರ ಅತೀಹೆಚ್ಚು ರಾಸಾಯನಿಕ ಹಸಿರು ಬಟಾಣಿಯಲ್ಲಿ ಕಂಡು ಬಂದಿದ್ದು, ಶೇ.60ರಷ್ಟು ಕಳಪೆಯಾಗಿವೆ ಎಂದು ಆರೋಗ್ಯ ಸಚಿವರು ವಿವರಿಸಿದರು.
ಸಿಹಿತಿಂಡಿಯ 83 ಮಾದರಿಗಳ ಪೈಕಿ 2ರಲ್ಲಿ ಮಾತ್ರ ಅಸುರಕ್ಷಿತ ಎಂದು ಕಂಡುಬಂದಿದೆ. ಇತ್ತೀಚೆಗೆ ವೈದ್ಯಕಿಯ ತಪಾಸಣೆಗಳು ಹೆಚ್ಚಾಗಿದ್ದರಿಂದ ಸುರಕ್ಷತಾ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಜನರಲ್ಲಿ ಜಾಗೃತಿ ಮೂಡಿದೆ.