ನವದೆಹಲಿ: ಮುಂದಿನ ಮೂರು ದಿನಗಳ ಕಾಲ ಉತ್ತರ ಭಾರತದ ರಾಜ್ಯಗಳು ತತ್ತರಿಸಲಿದ್ದು, 21 ನಗರಗಳಲ್ಲಿ ಸರಾಸರಿಗಿಂತ ಕನಿಷ್ಟ 3 ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ ಮೊದಲ ವಾರವಾದ ಭಾನುವಾರ 5 ರಾಜ್ಯಗಳ 21 ನಗರಗಳಲ್ಲಿ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಸರಾಸರಿಗಿಂತ ಹೆಚ್ಚಾಗಿದೆ. ಮುಂದಿನ ಮೂರು ದಿನಗಳಲ್ಲಿ ಕನಿಷ್ಠ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು ಕೇಂದ್ರ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ರಾಜಧಾನಿ ದೆಹಲಿಯಲ್ಲಿ ಅತೀ ಹೆಚ್ಚು ಬಿಸಿಗಾಳಿ ತಟ್ಟಲಿದ್ದು, ರಾಜಸ್ಥಾನ್, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾದಲ್ಲಿ ಹೆಚ್ಚು ತಾಪಮಾನ ಇರಲಿದೆ. ಮೊದಲ ವಾರದಲ್ಲೇ ಸರಾಸರಿಗಿಂತ 6.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
ಭಾನುವಾರ ಬಿಸಿಗಾಳಿ 8ರಿಂದ 10 ಕಿ.ಮೀ. ವೇಗದಲ್ಲಿ ಬೆಳಿಗ್ಗೆ ಹೊತ್ತು ಬೀಸಲಿದೆ. ಮಧ್ಯಾಹ್ನದ ವೇಳೆಗೆ 4ರಿಂದ 6 ಕಿ.ಮೀ.ಗೆ ಇಳಿಯಲಿದೆ ಮತ್ತು ದಕ್ಷಿಣ ಮುಖವಾಗಿ ಬೀಸುವ ಮೂಲಕ ದಕ್ಷಿಣ ರಾಜ್ಯಗಳ ಕಡೆ ಬೀಸಲಿದೆ ಎಂದು ವರದಿ ಮುನ್ಸೂಚನೆ ನೀಡಿದೆ.
ರಾಜಸ್ಥಾನ ಬಾರ್ಮರ್ ನಲ್ಲಿ ಅತ್ಯಧಿಕ 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು., ಇದು ಏಪ್ರಿಲ್ ಮೊದಲ ವಾರದಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ದಾಖಲೆ ಆಗಿದೆ. ಅಲ್ಲದೇ ಸಾಮಾನ್ಯಕ್ಕಿಂತ 6.9 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.