ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ತೆರಿಗೆ ನೀತಿಗಳು ಹಾಗೂ ಸಾಮಾಜಿಕ ಸೇವೆಗಳ ಮೇಲಿನ ಪ್ರಹಾರ ಮಾಡುವ ಅವರ ಆರ್ಥಿಕ ಕ್ರಮಗಳ ವಿರುದ್ಧ ಸಾವಿರಾರು ಜನರು ದೇಶದಾದ್ಯಂತ ಬೀದಿಗೆ ಇಳಿದು ಆಕ್ರೋಶ ಹೊರ ಹಾಕಿದ್ದಾರೆ.
“ಹ್ಯಾಂಡ್ಸ್ ಆಫ್!” ಎಂಬ ಘೋಷಣೆಯೊಂದಿಗೆ ನಡೆದ ಈ ಪ್ರತಿಭಟನೆ ಅಮೇರಿಕದ ಇತಿಹಾಸದಲ್ಲೇ ಇತ್ತೀಚಿನ ಕಾಲಘಟ್ಟದಲ್ಲಿ ನಡೆದ ಪ್ರಮುಖ ನಾಗರಿಕ ಚಳವಳಿ ಎಂದೇ ಹೇಳಲಾಗುತ್ತಿದೆ.
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಆರಂಭವಾದ ಜನಸಾಗರ ಲಾಸ್ ಏಂಜಲೀಸ್, ವಾಷಿಂಗ್ಟನ್ ಡಿಸಿ., ಬೋಸ್ಟನ್, ಅಟ್ಲಾಂಟಾ ಸೇರಿದಂತೆ ನೂರಾರು ಪಟ್ಟಣ ಗಳನ್ನು ವ್ಯಾಪಿಸಿಕೊಂಡರು. ಪ್ರತಿಭಟನಾಕಾರರು ಕೈಗಳಲ್ಲಿ “ಜನಸೇವೆ ನಮ್ಮ ಹಕ್ಕು”, “ಮೆಡಿಕೇಡ್ ಉಳಿಸಿರಿ”, “ಶಿಕ್ಷಣವಿಲ್ಲದೆ ಏನು ಭವಿಷ್ಯ?” ಎಂಬ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದರು.
ಟ್ರಂಪ್ ಆಡಳಿತವು ಮೆಡಿಕೇರ್, ಮೆಡಿಕೇಡ್ ಹಾಗೂ ಇತರ ಸಾಮಾಜಿಕ ಭದ್ರತಾ ಯೋಜನೆಗಳಿಗೆ ನೀಡುತ್ತಿದ್ದ ಬಂಡವಾಳವನ್ನು ಕಡಿತಗೊಳಿಸಿ, ಕೋಟ್ಯಾಧಿಪತಿ ಗಳಿಗೆ ತೆರಿಗೆ ರಿಯಾಯಿತಿಯನ್ನು ನೀಡುವ ಪ್ರಸ್ತಾವವನ್ನು ಮುಂದಿಟ್ಟಿದೆ ಎಂಬ ವಿಚಾರವೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಸಾಮಾಜಿಕ ಕಾರ್ಯಕರ್ತರು, ವರ್ಗಭೇದ ತೊಂದರೆ ಅನುಭವಿಸಿದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ದೇಶದ ಆರ್ಥಿಕತೆ ಕೆಲವು ಗಣನೀಯ ಕಾರ್ಪೊರೇಟ್ಗಳು ಮತ್ತು ಕೋಟ್ಯಾಧಿಪತಿಗಳಿಗಾಗಿ ಮಾತ್ರವಲ್ಲ, ಇದು ಎಲ್ಲರಿಗಾಗಿ ಸಮಾನವಾಗಿರಬೇಕು ಎಂದು ಶಿಕಾಗೊ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾರಿಯಾ ಜೋನ್ಸ್ ಹೇಳಿದರು.
ದೇಶದ ಎಲ್ಲ ೫೦ ರಾಜ್ಯಗಳಲ್ಲೂ ಈ ಬೃಹತ್ ಚಳವಳಿ ಪ್ರತಿಧ್ವನಿಸಿದ್ದು, ಟ್ರಂಪ್ ಅವರ ವಿರುದ್ಧ ಸಾರ್ವಜನಿಕ ವಿರೋಧದ ಮಟ್ಟವನ್ನು ಸ್ಪಷ್ಟಪಡಿಸಿದೆ.
ಈ ಪ್ರತಿಭಟನೆಗಳು ಕೇವಲ ಡೆಮಾಕ್ರಟಿಕ್ ಗಟ್ಟಿತನವಿರುವ ನಗರಗಳಲ್ಲಿ ಮಾತ್ರವಲ್ಲದೆ, ಟ್ರಂಪ್‌ಗೆ ಬೆಂಬಲವಿತ್ತ ವೆಸ್ಟ್ ವರ್ಜೀನಿಯಾ, ಟೆಕ್ಸಾಸ್‌ನ ಕೆಲವು ಭಾಗಗಳಲ್ಲಿಯೂ ನಡೆದವು. ಪ್ರತಿಭಟನೆಯೊಂದಿಗೇ ವಿದೇಶಗಳಲ್ಲಿಯೂ ಬೆಂಬಲದ ಧ್ವನಿ ಕೇಳಿಬಂದಿದೆ. ಲಂಡನ್, ಪ್ಯಾರಿಸ್, ಟೊರಾಂಟೋ ಮುಂತಾದ ಕಡೆಗಳಲ್ಲಿ ಅಮೆರಿಕದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಗೊಂಡಿದೆ.
ಟ್ರಂಪ್ ಅವರ ಹೊಸ ಆರ್ಥಿಕ ಮತ್ತು ತೆರಿಗೆ ನೀತಿ ಕೇವಲ ದೇಶೀಯವಾಗಿ ಮಾತ್ರವಲ್ಲ, ಜಾಗತಿಕವಾಗಿ ಕೂಡ ಚರ್ಚೆಗೆ ಗುರಿಯಾಗಿದೆ. ಪ್ರತಿ ಕ್ರಿಯೆ ವ್ಯಕ್ತಪಡಿ ಸಿದ ಟ್ರಂಪ್, “ನಾವು ಅಮೆರಿಕದ ಆರ್ಥಿಕತೆಯನ್ನು ಪುನಃ ಬಲಿಷ್ಠಗೊಳಿಸುತ್ತಿದ್ದೇವೆ. ಕೆಲವು ಜನರು ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳು ತ್ತಿದ್ದಾರೆ,” ಎಂದು ಟ್ವೀಟ್ ಮಾಡಿದರು. ಆದರೆ ಈ ಹೇಳಿಕೆ ಜನರ ಆಕ್ರೋಶವನ್ನು ತಗ್ಗಿಸುವಲ್ಲಿ ವಿಫಲವಾಗಿದೆ.
ಅಮೇರಿಕದ ಜನತೆ ಸರ್ಕಾರದಿಂದ ಕೇವಲ ಆರ್ಥಿಕ ಪ್ರಗತಿಯ ಅಂಕಿಅಂಶಗಳನ್ನಲ್ಲ, ಸಮಾನತೆ, ನ್ಯಾಯ, ಹಾಗೂ ಸಾಮಾಜಿಕ ಭದ್ರತೆಯ ಆಶಯವನ್ನೂ ನಿರೀಕ್ಷಿಸುತ್ತಾರೆ ಎಂಬ ಸ್ಪಷ್ಟ ಸಂದೇಶವೊಂದನ್ನು ಈ ಬೃಹತ್ ಚಳವಳಿ ಮೂಲಕ ರಾಷ್ಟ್ರದ ನಾಯಕರಿಗೆ ನೀಡಿದ್ದಾರೆ.