Menu

ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ ನಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ: ಸಿಎಂ

ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತು ಸಾರ್ಥಕಗೊಳಿಸುವ ಕೆಲಸ ನಮ್ಮಿಂದ ಆಗಬೇಕು. ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ ನಮ್ಮನ್ನು ವಿಧಾನಸೌಧಕ್ಕೆ ಆರಿಸಿ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ನೂತನ ನಿತ್ಯ ದೀಪಾಲಂಕಾರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪಾರ್ಲಿಮೆಂಟ್ ಮತ್ತು ವಿಧಾನಸೌಧ ಜನರ ಮತ್ತು ರಾಜ್ಯದ ಹಾಗೂ ದೇಶದ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ದೇಗುಲಗಳು. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತನ್ನು ಪ್ರತಿಯೊಬ್ಬರೂ ಸಾರ್ಥಕಗೊಳಿಸುವ ರೀತಿಯಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಿ ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಬೇಕು ಎಂದರು.

ಸ್ವಾತಂತ್ರ್ಯ ಬಂದು, ಸಂವಿಧಾನ ರಚನೆಯಾಗಿ 75 ವರ್ಷಗಳಾದರೂ ಅಸಮಾನತೆಯನ್ನು ಇನ್ನೂ ತೆಗೆದುಹಾಕಲು ಸಾಧ್ಯವಾಗಿಲ್ಲ. ವಿಧಾನಸೌಧ, ಸುವರ್ಣಸೌಧ, ವಿಕಾಸಸೌಧದಲ್ಲಿ ಕುಳಿತು ಸಮ ಸಮಾಜ ತರುವ ದಿಕ್ಕಿನಲ್ಲಿ ಶ್ರಮಿಸಬೇಕು. ಕಾನೂನು ಸುವ್ಯವಸ್ಥೆ ಸುಗಮ ಆಗಿರಬೇಕಾದರೆ ಅಸಮಾನತೆ ಅಳಿಯಬೇಕು ಎಂದು ಹೇಳಿದರು.

ಜನರ ಕೆಲಸ ಸರಿಯಾಗಿ ಮಾಡಲು ನಮ್ಮನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ. ಈ ಉದ್ದೇಶಕ್ಕಾಗಿ ವಿಧಾನಸೌಧ ಕಟ್ಟಿಸಲಾಗಿದೆ. ಈ ಉದ್ದೇಶ ಈಡೇರಿಸಿ‌ ಜನರ ಸಮಸ್ಯೆ ಬಗೆಹರಿಸುವ ಶಕ್ತಿ ನಮಗೆ ಬರಲಿ, ರಾಜ್ಯದ ಜನತೆಗೂ ಆರ್ಥಿಕ ಶಕ್ತಿ ತರಲು ಯತ್ನಿಸೋಣ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ, ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರಕ್ಕೆ ಕಾಳಜಿ ವಹಿಸಿ ಕಾರ್ಯಗತ ಮಾಡಿದ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳು ಅಭಿನಂದಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಕೆ.ಜೆ.ಜಾರ್ಜ್, ಹೆಚ್.ಕೆ.ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್  ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

Related Posts

Leave a Reply

Your email address will not be published. Required fields are marked *