“ವಿರೋಧ ಪಕ್ಷಗಳು ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಹೋರಾಟ, ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ,ಮಾಡಲಿ ಬಿಡಿ”ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ವಿಧಾನಸೌಧ ಆವರಣದಲ್ಲಿ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರು ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಅವರಿಗೆ ಆಕ್ರೋಶವಾಗಿರಬೇಕು. ಜನರಿಗೆ ಆಕ್ರೋಶವಿಲ್ಲ. ಅವರು ಬೆಲೆ ಏರಿಕೆ ಪ್ರಾರಂಭ ಮಾಡಿದ್ದಕ್ಕೆ ನಾವು ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ಆಮೂಲಕ ಜನರ ಬದುಕು ನೆಮ್ಮದಿ ತರುವ ಪ್ರಯತ್ನ ಮಾಡಿದ್ದೇವೆ. ” ಎಂದರು.
ಪಕ್ಷದ ಸಂಘಟನೆ ವಿಚಾರವಾಗಿ ನಿರ್ಣಯ: ಗುಜರಾತಿನ ಎಐಸಿಸಿ ಸಭೆ ಬಗ್ಗೆ ಕೇಳಿದಾಗ, “ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವರ್ಷವನ್ನು ಪಕ್ಷ ಸಂಘಟನಾ ವರ್ಷ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಘೋಷಣೆ ಮಾಡಿದ್ದಾರೆ. ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅನೇಕ ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಸಿ ಸಭೆ ಮಾಡಿದ್ದರು. ಇದೆಲ್ಲದರ ಸಂಬಂಧ ಎಐಸಿಸಿ ಕೆಲವು ನಿರ್ಣಯ ಕೈಗೊಳ್ಳಬೇಕಿದ್ದು, ಗುಜರಾತಿನಲ್ಲಿ ಸಭೆ ಕರೆದಿದ್ದಾರೆ. ನಾವು ಮಂಗಳವಾರ ಗುಜರಾತಿಗೆ ತೆರಳುತ್ತಿದ್ದು, ಮುಖ್ಯಮಂತ್ರಿಗಳು ಒಂದು ದಿನ ಮುಂಚಿತವಾಗಿ ತೆರಳಲಿದ್ದಾರೆ. ದೇಶ ಹಾಗೂ ಪಕ್ಷ ಉಳಿಸಲು ಅನೇಕ ನಿರ್ಣಯ ಕೈಗೊಳ್ಳಲಾಗುವುದು” ಎಂದು ಮಾಹಿತಿ ನೀಡಿದರು.
ಕೋವಿಡ್ ಅಕ್ರಮದ ತನಿಖಾ ವರದಿಯನ್ನು ನ್ಯಾ.ಕುನ್ಹಾ ಅವರು ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆ ಕೇಳಿದಾಗ, “ನಾನು ಬೆಂಗಳೂರಿನಿಂದ ಹೊರಗಡೆ ಇದ್ದೆ. ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆ ಮಾಡಲಾಗಿದೆ. ಈ ಹಿಂದೆ ನೀಡಿದ್ದ ವರದಿ ಮೇಲೆ ನಾವು ಅನೇಕ ಚರ್ಚೆ ಮಾಡಿದ್ದೇವೆ. ಈಗ ಕೊಟ್ಟಿರುವ ವರದಿಯ ಮಾಹಿತಿ ಇಲ್ಲ” ಎಂದರು.