Menu

ಇಂದಿನಿಂದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಯುದ್ಧ ಆರಂಭ: ಎಚ್.ಡಿ. ಕುಮಾರಸ್ವಾಮಿ

hd kumarswamy

ಬೆಂಗಳೂರು: ನನ್ನ ಹತ್ರ ಟನ್ ಗಟ್ಟಲೆದಾಖಲೆಗಳಿವೆ. ಸುಖಾಸುಮ್ಮನೆ ನನ್ನನ್ನು ಕೆಣಕಬೇಡಿ ನನ್ನನ್ನು ಎಂದು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸವಾಲು ಹಾಕಿದ್ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದರು.

ನಾನು ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಳ್ಳಾರಿಗೆ ನನಗೂ ಏನು ಸಂಬಂಧ ಎಂದು ಹೇಳಿಕೊಂಡಿದ್ದಾರೆ. ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳು ಇವೆ. ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ ನಾನು, ಇರುವ ಸತ್ಯ ಹೇಳುತ್ತಿದ್ದೇನೆ ಎಂದು ಅವರು ಎಚ್ಚರಿಕೆ ನೀಡಿದರು.

ಈ ಸರಕಾರಕ್ಕೆ ನಾನು ನೇರವಾಗಿ ಹೇಳುತ್ತಿದ್ದೇನೆ. ನನ್ನ ಮೇಲಷ್ಟೇ ರಾಜಕೀಯ ಹಗೆತನ ಸಾಧಿಸುತ್ತಿರುವುದು ಅಷ್ಟೇ ಅಲ್ಲ, ರಾಜ್ಯದ ಜನರನ್ನು ಕಿತ್ತು ತಿನ್ನುತ್ತಿರುವ ಈ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡುತ್ತಿದ್ದೇನೆ. ಸವಾಲು ಹಾಕಲು ಇಲ್ಲಿಗೆ ಬಂದಿದ್ದೇನೆ. ಇಂದಿನಿಂದ ಈ ಜನ ವಿರೋಧಿ ಸರ್ಕಾರದ ವಿರುದ್ಧ ನೇರ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ಅವರು ಗುಡುಗಿದರು.

2003- 2004ರಲ್ಲಿ ಅವರು ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಅದಿರಿನ ಮಣ್ಣಿನ ನೆಪದಲ್ಲಿ ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಲ್ಲಿ ಕದ್ದು ಸಾಗಿಸಿದರು. ಆ ಅದಿರು ಎಲ್ಲಿಗೆ ಹೋಯಿತು? ಏನು ಮಾಡಿದರು. ಅವರು ಯಾರಿಗೆಲ್ಲ ಪತ್ರ ಬರೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಉಪ ಮುಖ್ಯಮಂತ್ರಿ ನನ್ನನ್ನು ಕೆಣಕುತ್ತಿದ್ದಾರೆ. ಸುಖಾಸುಮ್ಮನೆ ನನ್ನ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ. ನಾನು ಸುಮ್ಮನಿರಲು ಸಾಧ್ಯ ಇಲ್ಲ ಅಲ್ಲವೇ? ಅವರ ಒಂದೊಂದೇ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ. ಅವರು ಹಗರಣಗಳ ಮಹಾನಾಯಕ. ಈ ಕ್ಷಣದಿಂದ ಈ ಸರ್ಕಾರದ ವಿರುದ್ಧ ಸಮರ ಆರಂಭ ಮಾಡಿದ್ದೇನೆ. ಅದಕ್ಕೆ ಈ ಮಾಧ್ಯಮಗೋಷ್ಠಿ ಕರೆದಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಕೇಂದ್ರ ಸಚಿವರು.

ಪಾಪ.. ಅವರಿಗೆ ಏನೂ ಗೊತ್ತಿಲ್ಲ. ನನಗೆ ಕನಕನಪುರ ಅಷ್ಟೇ ಸಾಕು. ಬಳ್ಳಾರಿಗೆ ಯಾಕೆ ಹೋಗಲಿ ಎಂದು ಹೇಳಿದ್ದಾರೆ. ಸಂಬಂಧ ಇಲ್ಲ ಎಂದಾದರೆ ಅದಿರು ಮಣ್ಣಿನ ಬಗ್ಗೆ ಖನಿಜ ಇಲಾಖೆಗೆ ಹಾಗೂ ಖನಿಜ ಸಂಪನ್ಮೂಲ ಇಲಾಖೆಗೆ ಪತ್ರಗಳನ್ನು ನಿರಂತರವಾಗಿ ಯಾಕೆ ಬರೆದರು? ಅಧಿಕಾರಿಗಳ ಮೇಲೆ ಯಾಕೆ ಒತ್ತಡ ಹಾಕಿದರು? ರಸ್ತೆಗೆ ಮಣ್ಣು ಬೇಕು ಎಂದು ಬಳ್ಳಾರಿಯಿಂದ ಅದಿರು ಮಣ್ಣು ತರಿಸಿಕೊಂಡರು. ಅತ್ಯಂತ ಗುಣಮಟ್ಟದ ಅದಿರು ಇದ್ದ ಮಣ್ಣನ್ನು ಏನು ಮಾಡಿದರು? ಎಂದು ಪ್ರಶ್ನೆ ಮಾಡಿದರು.

ಉಪ ಮುಖ್ಯಮಂತ್ರಿ ಎನ್ನುವ ವ್ಯಕ್ತಿ ಎಷ್ಟು ಕಂಪನಿಗಳ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಏಳು ಕಂಪನಿಗಳ ಹೆಸರಿನಲ್ಲಿ ಅವರು ವ್ಯವಹಾರ ನಡೆಸಿ ಪತ್ರ ವ್ಯವಹಾರವನ್ನೂ ನಡೆಸಿದ್ದಾರೆ. ಎಲ್ಲಾ ದಾಖಲೆಗಳು ಇವೆ. ಅದಷ್ಟು ಬೇಗ ಬಿಡುಗಡೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನೂ ಕಸ ಎತ್ತುತ್ತಿದ್ದೆ, ಇಲ್ಲ ಎಂದವರು ಯಾರು?

ನಾನು ಯುವಕನಾಗಿದ್ದಾಗ ಜೀವನೋಪಾಯಕ್ಕಾಗಿ ಬೆಂಗಳೂರಿನ ಹೊಬೇಗೌಡನಗರ, ಸುಧಾಮನಗರ ಮತ್ತು ವಿಲ್ಸನ್ ಗಾರ್ಡನ್ ವಾರ್ಡುಗಳಲ್ಲಿ ಕಸ ಎತ್ತುವ ಗುತ್ತಿಗೆ ತೆಗೆದುಕೊಂಡಿದ್ದೆ. ಆಮೇಲೆ ನಮ್ಮ ತಂದೆಯವರು ಬೇಡ ಎಂದು ತಾಕೀತು ಮಾಡಿದ ಮೇಲೆ ಅದನ್ನು ಬಿಟ್ಟೆ. ಯಾವುದೇ ಕಾರಣಕ್ಕೂ ಸರ್ಕಾರಿ ಗುತ್ತಿಗೆ ತೆಗೆದುಕೊಳ್ಳ ಕೂಡದು ಎಂದು ಅವರು ಹೇಳಿದ್ದರು ಎಂಬ ಸಂಗತಿಯನ್ನು ಅವರು ಸುದ್ದಿಗಾರರ ಗಮನಕ್ಕೆ ತಂದರು.

ಕಸ ಗುತ್ತಿಗೆಯಲ್ಲಿಯೂ ಕೋಟಿ ಕೋಟಿ ಹೊಡೆಯಲು ಹೊರಟಿದ್ದರು!

ಡಿಕೆಶಿ ಮೇಲೆ ಮತ್ತೂ ವಾಗ್ದಾಳಿ ಮುಂದುವರಿಸಿದ ಕೇಂದ್ರ ಸಚಿವರು, ಬಿಬಿಎಂಪಿ ಕಸದ ಗುತ್ತಿಗೆ ನೀಡುವುದರಲ್ಲಿಯೂ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲು ಹೊರಟಿದ್ದರು. ಮೂವತ್ತು ವರ್ಷಗಳಷ್ಟು ಸುದೀರ್ಘ ಅವಧಿಗೆ ಬೆಂಗಳೂರಿನ ಕಸ ಎತ್ತಲು ಚೆನ್ನೈನ ಒಬ್ಬ ವ್ಯಕ್ತಿಗೆ ಗುತ್ತಿಗೆ ನೀಡುವ ಹಗರಣಕ್ಕೆ ಮುಂದಾಗಿದ್ದರು. ಪ್ರತಿ ಟನ್ ಕಸ ಎತ್ತಲು ₹6500 ಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿ ಮಾಡಿ ಅಲ್ಲಿಂದ ಕಮಿಷನ್ ಹೊಡೆಯಲು ಮುಂದಾಗಿದ್ದರು. ಇಲ್ಲಿ ಕಡಿಮೆ ಎಂದರೂ ₹15,000 ಕೋಟಿ ಹೊಡೆಯಲು ಹೊರಟಿದ್ದರು ಎಂದು ನಾನು ಹೇಳಿದ ಮೇಲೆ ₹6500 ಮೊತ್ತವನ್ನು ₹3, 000ಕ್ಕೆ ಕಡಿಮೆ ಮಾಡಿದರು.
ಎರಡೂ ಮೊತ್ತಗಳ ನಡುವೆ ಎಷ್ಟು ಅಂತರ ಇದೆ ಎಂಬುದನ್ನು ನೀವು ಗಮನಿಸಬೇಕು ಎಂದು ಕುಮಾರಸ್ವಾಮಿ ಅವರು ಒಂದೊಂದೇ ಅಂಶವನ್ನು ಬಿಡಿಸಿಟ್ಟರು.

ನಾನು ಆ ಹಗರಣದ ಬಗ್ಗೆ ಮಾತನಾಡಿದ್ದರಿಂದಲೇ ಬೆಂಗಳೂರಿನಲ್ಲಿ ಕಸ ಎತ್ತಲು ಮಹಾನಾಯಕ ಒಬ್ಬರು ಅಡ್ಡಿ ಮಾಡಿದರು ಎಂದು ಉಪ ಮುಖ್ಯಮಂತ್ರಿ ಆರೋಪ ಮಾಡಿದ್ದಾರೆ. ಆ ಮಹಾನಾಯಕ ಬೇರೆ ಯಾರೂ ಅಲ್ಲ, ನಾನೇ. ಅವತ್ತು ನಾನು ಆ ವಿಷಯ ಬಹಿರಂಗಪಡಿಸಿದೆ ಹೋಗಿದ್ದರೆ ಕೋಟ್ಯಂತರ ರೂಪಾಯಿ ಹಗರಣ ನಡೆಯುತ್ತಿತ್ತು. ನಾನು ಹೇಳಿದ್ದು ಜನರ ಹಣ ಕೊಳ್ಳೆ ಹೊಡೆಯಬೇಡಿ ಎಂದೇ ಹೊರತು ಕಸ ಎತ್ತಬೇಡಿ ಎಂದಲ್ಲ ಎಂದು ಅವರು ಕುಟುಕಿದರು.

ನಿಮ್ಮ ಕಸ ಕ್ಲೀನ್ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ!!

ಕಾಂಗ್ರೆಸ್ ಸರ್ಕಾರ ಎಲ್ಲಾ ಅಕ್ರಮ, ಅನ್ಯಾಯ ಮಾಡಿ ಎಲ್ಲೆಂದರಲ್ಲಿ ಕಸ ಸೃಷ್ಟಿ ಮಾಡಿದೆ. ಅದನ್ನು ಎತ್ತುವ, ಆ ಮೂಲಕ ಜನರನ್ನು ರಕ್ಷಣೆ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ. ಅದೇ ನಿಮ್ಮ ಇತಿಶ್ರೀ ಹಾಡಲಿದೆ ಎಂದು ಕೇಂದ್ರ ಸಚಿವರು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.

ಸರಕಾರದಲ್ಲಿ ಘಜ್ನಿ, ಘೋರಿ ಮಹಮ್ಮದ್ ಇದ್ದಾರೆ!!

ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು, ದರೋಡೆಗಳು ಮಿತಿಮೀರಿವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್ ಹಾಗೂ ಮಲ್ಲಿಕ್ ಖಫೂರ ಇದ್ದಾರೆ. ಅವರನ್ನು ನಾಚುವ ರೀತಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಇವರು ಎಂದು ಬೇಸರ ವ್ಯಕ್ತಪಡಿಸಿದರು.

Related Posts

Leave a Reply

Your email address will not be published. Required fields are marked *