ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು,ಕಳೆದೆರಡು ವರ್ಷಗಳಲ್ಲಿ 9,509 ಪ್ರಕರಣ ದಾಖಲಾಗಿದೆ. 80 ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ.
ಮಾನವ ಹಕ್ಕುಗಳ ಬಗ್ಗೆ ಜನರಲ್ಲಿ ನಿರಂತರ ಜಾಗೃತಿ ಹಾಗೂ ತಿಳುವಳಿಕೆ ಪ್ರಯತ್ನದಿಂದ ದೂರುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ದಾಖಲಾಗುತ್ತಿವೆ. 2023ರಲ್ಲಿ 4,162 ಪ್ರಕರಣಗಳು ದಾಖಲಾದರೆ 2024ರಲ್ಲಿ 5,347 ಸೇರಿದಂತೆ ಒಟ್ಟು 9,509 ಪ್ರಕರಣ ದಾಖಲಾಗಿವೆ. ಈ ಪೈಕಿ ಬೆಂಗಳೂರು ನಗರದಲ್ಲಿ 3,537 ಪ್ರಕರಣ ದಾಖಲಾಗಿವೆ.
ಮಾನವ ಹಕ್ಕು ಉಲ್ಲಂಘನೆ ತಗ್ಗಿಸಲು ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ. ಪೊಲೀಸ್ ಠಾಣೆ, ಕಾರಾ ಗೃಹ, ಸರ್ಕಾರಿ ಆಸ್ಪತ್ರೆ, ವಸತಿನಿಲಯ ಹಾಗೂ ಬಸ್ ನಿಲ್ದಾಣಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿರುವ ಕುಂದುಕೊರತೆಗಳ ಬಗ್ಗೆ ದೂರುಗಳನ್ನು ಸ್ಥಳದಲ್ಲಿ ಸ್ವೀಕರಿಸಿ, ಕೂಡಲೇ ಸರಿಪಡಿಸಲಾಗುತ್ತಿದೆ.
ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ. ಕಾನೂನು ಪದವಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಉಲ್ಲಂಘನೆ ಕಂಡುಬಂದರೆ ದೂರು ನೀಡುವಂತೆ ಮಾಹಿತಿ ನೀಡಲಾಗುತ್ತಿದೆ. ದಾಖಲಾಗಿರುವ ಪ್ರಕರಣಗಳನ್ನು ಆಯೋಗದ ಪೂರ್ಣ ಹಾಗೂ ಏಕಸದಸ್ಯ ಪೀಠಗಳು ವಿಚಾರಣೆ ನಡೆಸಿ ವ್ಯಾಜ್ಯಗಳನ್ನು ವಿಲೇವಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಯೋಗದಲ್ಲಿ ದಾಖಲಾಗುವ ಉಲ್ಲಂಘನೆ ಪ್ರಕರಣಗಳ ವಿಚಾರಣೆ ನಡೆಸಲು ಸಂಬಂಧಿಸಿದ ವಿಚಾರಣಾ ಪೀಠಗಳು ಪರಿಶೀಲಿಸಿ ಸಕ್ಷಮ ಪ್ರಾಧಿಕಾರಗಳಿಂದ ವರದಿ ಹಾಗೂ ದೂರುದಾರರ ಹೇಳಿಕೆ, ಸಾಕ್ಷಿಗಳು ಹಾಗೂ ದಾಖಲಾತಿಗಳನ್ನು ಪರಿಶೀಲಿಸಲಿವೆ. ಕೆಲ ಪ್ರಕರಣಗಳಲ್ಲಿ ಎಫ್ಎಸ್ಎಲ್ ವರದಿ ಪಡೆದು ಸಮಗ್ರ ವಿಚಾರಣೆ ಮುಕ್ತಾಯಗೊಳಿಸಿವೆ. ಈ ಪೈಕಿ ಎರಡು ವರ್ಷಗಳಲ್ಲಿ 80 ಪ್ರಕರಣಗಳಲ್ಲಿ ತಪ್ಪಿತಸ್ಥ ಅಧಿಕಾರಿ/ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಾಗೂ ಸಂತ್ರಸ್ತರಿಗೆ ಕಾನೂನು ಪ್ರಕಾರ ಪರಿಹಾರ ನೀಡಲು ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ.
ಆಯೋಗದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ದಾಖಲಾಗುವ ಸಂಖ್ಯೆ ಹೆಚ್ಚಳವಾಗುತ್ತಿವೆ. ಮಾನವ ಹಕ್ಕುಗಳು ಹಾಗೂ ಉಲ್ಲಂಘನೆ ತಗ್ಗಿಸಲು ಹೆಚ್ಚಿನ ಅರಿವು ಹಾಗೂ ಜಾಗೃತಿ ಮೂಡಿಸುತ್ತಿರುವುದರಿಂದ ಪ್ರಕರಣಗಳ ಸಂಖ್ಯೆ ಅಧಿಕಗೊಳ್ಳಲು ಕಾರಣವಾಗಿದೆ. ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳುತ್ತಿರುವುದರಿಂದ ದೂರುಗಳು ಹೆಚ್ಚಾಗಿ ದಾಖಲಾಗುತ್ತಿವೆ. ಎರಡು ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ 3,537, ಮೈಸೂರು 516, ತುಮಕೂರಿನಲ್ಲಿ 528 ಗ್ರಾಮಾಂತರ ಜಿಲ್ಲೆಯಲ್ಲಿ 246, ಬೆಳಗಾವಿ 367, ಧಾರವಾಡ 234, ಹಾಸನ 260, ಕಲಬುರಗಿ 247, ಕೋಲಾರ 251 ಪ್ರಕರಣಗಳು ದಾಖಲಾಗಿವೆ ಎಂದು ಆಯೋಗವು ತಿಳಿಸಿದೆ.