ದರ ಏರಿಕೆ ನೀತಿ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ. ಸಿಎಂ ಮನೆ ಮುತ್ತಿಗೆ ಯತ್ನ ಹಾಗೂ ರಸ್ತೆ ತಡೆಗೆ ನಿರ್ಧರಿಸಿದೆ. ಮಧ್ಯಾಹ್ನಕ್ಕೆ ಅಹೋರಾತ್ರಿ ಹೋರಾಟ ಕೊನೆಗೊಳಿಸಲು ನಿರ್ಧರಿಸಲಾಗಿದೆ.
ಫ್ರೀಡಂ ಪಾರ್ಕ್ ಇರುವ ಶೇಷಾದ್ರಿ ರಸ್ತೆ ತಡೆಗೆ ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಮುಖಂಡರು ರಸ್ತೆಗಿಳಿದು ಸಿಎಂ ಮನೆ ಕಡೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ಸಿಎಂ ಮನೆ ಮುತ್ತಿಗೆ ಹಾಕಲಿದ್ದು, 5-10 ಸಾವಿರ ಕಾರ್ಯಕರ್ತರು ಬರ್ತಾರೆ. ಸಿಎಂ ಮನೆ ಮುತ್ತಿಗೆ ಹಾಕಿ ರಸ್ತೆ ತಡೆಯೊಂದಿಗೆ ಶಾಂತಿಯುತವಾಗಿ ಹೋರಾಟ ಮಾಡ್ತೇವೆ. ಗಾಂಧಿ ತತ್ವದ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇದ್ದರೆ ಹೋರಾಟಕ್ಕೆ ಅವಕಾಶ ಕೊಡಲಿ. ನಾವೇನೆ ಮಾಡಿದ್ರೂ ಅದಕ್ಕೆ ವಿರುದ್ಧ ಮಾಡ್ತಿದೆ ಸರ್ಕಾರ. ದರ ಏರಿಕೆ ಬೇಡ ಅಂದರೆ ಮಾಡ್ತೀವಿ ಅಂತಿದ್ದಾರೆ. ಡೀಸೆಲ್ ದರ ಏರಿಸಿದ್ರು. ಈಗ ನೀರಿನ ದರ ಏರಿಸಲು ಹೊರಟಿದ್ದಾರೆ. ಹೋರಾಟ ಮಾಡ್ತೇವೆ, ಇವರಿಗೆ ಲೂಟಿ ಹೊಡೆಯಲು ಬಿಡಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ಲೋಕಾಯುಕ್ತಕ್ಕೆ ಕೊಟ್ಟರು. ಲೋಕಾಯುಕ್ತ ಸಾಬೀತು ಮಾಡಲಿಲ್ಲ. ನಂತರ ನ್ಯಾ.ನಾಗಮೋಹನ ದಾಸ್ ಆಯೋಗಕ್ಕೆ ಕೊಟ್ರು. ನಾಹಮೋಹನದಾಸ್ ನಾಗಲೋಕದಿಂದ ಬಂದಿದ್ದಾರಾ, ಪ್ರತಿಯೊಂದಕ್ಕೂ ಅವರನ್ನೇ ನೇಮಕ ಮಾಡ್ತಿರೋದ್ಯಾಕೆ ಸರ್ಕಾರ, ಕ್ಲೀನ್‌ಚಿಟ್ ತಗೊಳ್ಳೋಕ್ಕಾ ಎಂದು ಪ್ರಶ್ನಿಸಿದ್ದಾರೆ.
ಲೋಕಾಯುಕ್ತದವರು ಪತ್ತೆಹಚ್ಚಲು ಆಗದ್ದನ್ನು ನ್ಯಾ.ನಾಗಮೋಹನ ದಾಸ್ ಪತ್ತೆ ಮಾಡಿದ್ರಾ, ಗುತ್ತಿಗೆದಾರರ ವಿಚಾರದಲ್ಲಿ ಕಾಂಗ್ರೆಸ್ ಆಧಾರ ಇಲ್ಲದಿದ್ದರೂ ನಮ್ಮ ಮೇಲೆ ಆರೋಪ ಮಾಡಿ ಅದನ್ನೇ ಬಂಡವಾಳ ಮಾಡಿ ಸರ್ಕಾರ ರಚಿಸಿತು ಅದೇ ಗುತ್ತಿಗೆದಾರರು ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ 60% ಕಮಿಷನ್ ಆರೋಪ ಮಾಡ್ತಿದ್ದಾರಲ್ಲ. ಇದಕ್ಕೆ ನಾಗಮೋಹನ ದಾಸ್ ಏನ್ ಹೇಳ್ತಾರೆ ನೋಡಬೇಕು ಎಂದು ಕಿಡಿ ಕಾರಿದ್ದಾರೆ.
ಮುಡಾ ಪ್ರಕರಣದಲ್ಲಿ ಇಡಿ ತನಿಖೆಗೆ ಸಮ್ಮತಿ ವಿಚಾರವಾಗಿ ಮಾತನಾಡಿ, ಲೋಕಾಯುಕ್ತ ಮೂಲಕ ಕ್ಲೀನ್‌ಚಿಟ್ ಪಡೆದರೂ ಹೈಕೋರ್ಟ್ ಇಡಿಗೆ ಅನುಮತಿ ಕೊಟ್ಟಿದೆ. ಮುಡಾ ಪ್ರಕರಣ ಸಿಬಿಐ ತನಿಖೆಗೆ ಸೂಕ್ತವಾದ ಪ್ರಕರಣ. ಈಗ ಇಡಿ ತನಿಖೆಗೆ ಅನುಮತಿ ಸಿಕ್ಕಿದೆ. ಇದರಲ್ಲಿ ಸಿಎಂ ಸಿಕ್ಕಿ ಬೀಳುತ್ತಾರೆ ಎಂದರು.