ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ನೂತನ ಕರ್ನಾಟಕ ಭವನ(ಕಾವೇರಿ)ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನಾ ಸಮಾರಂಭವು ಬುಧವಾರ ಸಂಜೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದು, ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೌರವ ಆಹ್ವಾನಿತರಾಗಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ.
ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತರಾಮನ್ ಅವರಿಗೂ ಆಹ್ವಾನ ನೀಡಲಾಗಿದೆ. ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ ಭಾಗಿಯಾಗಲಿದ್ದಾರೆ.
ದೆಹಲಿಯ ಪ್ರತಿಷ್ಠಿತ ಚಾಣಕ್ಯಪುರಿಯಲ್ಲಿ ನಿರ್ಮಾಣವಾಗಿರುವ ಈ ಕಟ್ಟಡವು 3,532 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಒಟ್ಟು 12,212 ಚದರ ಮೀಟರ್ (1,31,450 ಚದರ ಅಡಿ) ನಿರ್ಮಾಣ ಪ್ರದೇಶವಿದ್ದು, ಭವನವು 2ಬಿ+ ಜಿ +6ಯು ರಚನೆಯಲ್ಲಿ 9 ಅಂತಸ್ತು ಹೊಂದಿದೆ. ಒಟ್ಟು 52 ಕೊಠಡಿಗಳಿದ್ದು, ಅದರಲ್ಲಿ 2 ವಿವಿಐಪಿ ಸೂಟ್‌ಗಳು, 32 ಸೂಟ್ ರೂಂಗಳು ಮತ್ತು 18 ಸಿಂಗಲ್ ರೂಂಗಳು ಸೇರಿವೆ. 86 ಶೌಚಾಲಯಗಳು ಮತ್ತು ಬೇಸ್‌ಮೆಂಟ್‌ನಲ್ಲಿ 10 ಕಾರ್ ಪಾರ್ಕಿಂಗ್ ಸೌಲಭ್ಯವಿದೆ.
ಯೋಜನೆಯು 2018ರಲ್ಲಿ ಆರಂಭವಾಗಿದ್ದು, 81.00 ಕೋಟಿ ರೂ. ಮೀಸಲಿಡಲಾಗಿತ್ತು. ಕಾಮಗಾರಿ ಅಂತ್ಯದ ವೇಳೆಗೆ ಯೋಜನೆಯ ವೆಚ್ಚ 138 ಕೋಟಿ ರೂ. ತಲುಪಿದೆ.