ಬೆಂಗಳೂರು: ಹಲವು ಬಾರಿ ಮುಂದೂಡಿಕೆ ನಂತರ ಕೊನೆಗೂ ಇಂದು 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡಿಸಲಾಗಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡನೆ ಮಾಡಿದ್ದಾರೆ.
ಜನಪ್ರತಿನಿಧಿಗಳಿಲ್ಲದೇ ಸತತ ಐದನೇ ಬಾರಿಗೆ ಬಜೆಟ್ ಮಂಡಿಸಿದ್ದು, ಇದರಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
8 ಪರಿಕಲ್ಪನೆ ಆಧಾರದಲ್ಲಿ ಬಜೆಟ್ ಮಂಡಿಸಲಾಗಿದ್ದು, ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆ ಎತ್ತಿಹಿಡಿಯಲಾಗಿದೆ. ಕಳೆದ ಬಜೆಟ್ನ ಕೆಲ ಯೋಜನೆಗಳು ಯಥಾಸ್ಥಿತಿ ಮುಂದುವರಿಕೆಯಾಗಿದೆ.
ಬ್ರ್ಯಾಂಡ್ ಬೆಂಗಳೂರು, ವೈಬ್ರೆಂಟ್ ಬೆಂಗಳೂರು, ಆರೋಗ್ಯ ಬೆಂಗಳೂರು ಸೇರಿದಂತೆ ವಿವಿಧ ಯೋಜನೆಗಳಿಗೆ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ.
ಬರೋಬ್ಬರಿ 19 ಸಾವಿರ ಕೋಟಿ ರೂ ಗಾತ್ರದ ಬಜೆಟ್ ಇದಾಗಿದ್ದು, ಇತ್ತ ಇದೇ ತಿಂಗಳ 27ನೇ ತಾರೀಕು ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆದರೆ ಸತತ ಮೂರು ಭಾರೀ ಬಜೆಟ್ ಮಂಡನೆ ದಿನಾಂಕ ಬದಲಾಯಿಸಿದ್ದ ಪಾಲಿಕೆ, ಇಂದು ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್ನಲ್ಲಿ ಬಜೆಟ್ ಮಂಡಿಸಿದೆ. ಈ ವೇಳೆ ಬಿಬಿಎಂಪಿಯ ಆಡಳಿತಗಾರ ಉಮಾಶಂಕರ್, ಕಮಿಷನರ್ ತುಷಾರ್ ಗಿರಿನಾಥ್ ಹಾಜರಾಗಿದ್ದರು.
ಬಜೆಟ್ ಮುಖ್ಯಾಂಶಗಳು
ಪಾಲಿಕೆ ಬಜೆಟ್ ಮೇಲೆ ಸಿಟಿಮಂದಿ ಕೂಡ ಸಾಕಷ್ಟು ನಿರೀಕ್ಷೆ ಇಟ್ಟಿದ್ದರು. ಪಾಲಿಕೆ ಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು? ಬ್ರ್ಯಾಂಡ್ ಬೆಂಗಳೂರು, ಆರೋಗ್ಯ ಬೆಂಗಳೂರು ಯೋಜನೆಗೆ 413 ಕೋಟಿ ರೂ ಅನುದಾನ.
ಬಿಬಿಎಂಪಿ ವ್ಯಾಪ್ತಿಯಲ್ಲಿ 19 ಹೊಸ ಆಸ್ಪತ್ರೆಗಳ ನಿರ್ಮಾಣ, 852 ಹಾಸಿಗೆಗಳ ಸಾಮರ್ಥ್ಯವನ್ನು 1122 ಹಾಸಿಗೆಗಳಿಗೆ ಹೆಚ್ಚಳ, 26 ಹೊಸ ಕೇಂದ್ರಗಳಲ್ಲಿ ಡೆಂಟಲ್ ಆಸ್ಪತ್ರೆಗಳ ನಿರ್ಮಾಣ.
ಬೆಂಗಳೂರು ನಗರದ ಬಡವರು, ವಲಸಿಗರು, ಅಲೆಮಾರಿಗರಿಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೊಸ ಯೋಜನೆ ಜಾರಿ.
ಯೋಜನೆ ಕಾರ್ಯನಿಯೋಜನೆಗಾಗಿ 144 ಎಲೆಕ್ಟ್ರಿಕ್ ವಾಹನ, ಎಮರ್ಜೆನ್ಸಿ ವೇಳೆ ತುರ್ತು ಆರೈಕೆಗೆ 26 BLS ಆ್ಯಂಬುಲೆನ್ಸ್ಗಳ ಖರೀದಿ.
ಬ್ರ್ಯಾಂಡ್ ಬೆಂಗಳೂರು, ಆರೋಗ್ಯ ಬೆಂಗಳೂರು ಯೋಜನೆ ಅಡಿಯಲ್ಲಿ ಬೆಂಗಳೂರಿನಲ್ಲಿ 7 ಫಿಸಿಯೋಥೆರಪಿ ಕೇಂದ್ರಗಳ ಸ್ಥಾಪನೆ.
ಗರ್ಭಿಣಿಯರು, ನವಜಾತ ಶಿಶುಗಳ ಆರೈಕೆಗೆ ‘ಸೇವ್ ಮಾಮ್ AI’ ಯೋಜನೆ.
200 ಬೆಡ್ಗಳ 24X7 ಆರೈಕೆ ಕೇಂದ್ರಗಳ ಸ್ಥಾಪನೆ, 2 ರೆಫೆರಲ್ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಯೋಜನೆ, ಎಂಸಿ ಲೇಔಟ್ನಲ್ಲಿ 300 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಮನವಿ ಮಾಡಲಾಗಿದೆ.
ಆಸ್ಪತ್ರೆ ನಿರ್ಮಾಣಕ್ಕಾಗಿ 633 ಕೋಟಿ ರೂ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಬೀದಿ ನಾಯಿಗಳ ನಿರ್ವಹಣೆಗೆ 60 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.
75,000 ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ, 1,80,0000 ನಾಯಿಗಳಿಗೆ ವ್ಯಾಕ್ಸಿನ್ ಹಾಕಲು ಯೋಜನೆಗೆ ಮುಂದಾಗಿದ್ದು, ಪಾಲಿಕೆ 6 ವಲಯದಲ್ಲಿ ಪಶು ವೈದ್ಯಕೀಯ ಚಿಕಿತ್ಸಾಲಯ ಆರಂಭ.
ಬೊಮ್ಮನಹಳ್ಳಿ, ಮಹದೇವಪುರ ವಲಯದಲ್ಲಿ ಎಬಿಸಿ ಕೇಂದ್ರ ಸ್ಥಾಪನೆಗೆ 7 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.
ಹೊಸದಾಗಿ ಕಸಾಯಿಖಾನೆ ನಿರ್ಮಾಣಕ್ಕೆ 10 ಕೋಟಿ ರೂ., ಕಸಾಯಿಖಾನೆ ನಿರ್ವಹಣೆಗೆ 2 ಕೋಟಿ ರೂ ಅನುದಾನ ಮೀಸಲಿಡಲಾಗಿದೆ.
225 ವಾರ್ಡ್ಗಳ ಅಭಿವೃದ್ಧಿಗಾಗಿ ಪ್ರತಿ ವಾರ್ಡ್ಗೆ 2.50 ಕೋಟಿಗಳಂತೆ ಹಾಗೂ ನಿರ್ವಹಣೆ ಕಾಮಗಾರಿಗಳಿಗಾಗಿ 50 ಲಕ್ಷಗಳಂತೆ ಒಟ್ಟಾರೆ 675 ಕೋಟಿ ರೂ ಅನುದಾನ.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯ ಅಡಿಯಲ್ಲಿ 2024-25ನೇ ಸಾಲಿನಲ್ಲಿ 3 ವರ್ಷಗಳ ಅವಧಿಗೆ ಒಟ್ಟು 2828.00 ಕೋಟಿಗಳ ಬೃಹತ್ ಯೋಜನೆಗಳ ಪ್ರಸ್ತಾವನೆ ನೀಡಲಾಗಿದೆ.
2024 -25ನೇ ಸಾಲಿನಲ್ಲಿ ಈಗಾಗಲೇ ರೂ.660 ಕೋಟಿ ರೂ ವರ್ಗಾಯಿಸಲಾಗಿದೆ.
2025-26 ಸಾಲಿನಲ್ಲಿ ರೂ.700 ಕೋಟಿ ರೂ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದ್ದು, ಸದರಿ ಮೊತ್ತವನ್ನು ಸಹ ಎಸ್ಕೋ ಖಾತೆಗೆ ವರ್ಗಾಯಿಸಲಾಗುವುದು.
ಒಟ್ಟಾರೆ 2025-26ನೇ ಸಾಲಿನಲ್ಲಿ ಒಟ್ಟು ರೂ.1360 ಕೋಟಿ ರೂ ಪಾವತಿಗೆ ಕ್ರಮವಹಿಸಲಾಗಿದ್ದು,
ಮುಂದಿನ ಸಾಲಿನಲ್ಲಿ ಉಳಿದ ಮೊತ್ತಕ್ಕೆ ಅನುದಾನವನ್ನು ಒದಗಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.