ಬೆಳಗಾವಿ: ವಿಡಿಯೋ ಕಾಲ್ ಮಾಡಿ ನಗ್ನ ಚಿತ್ರಗಳಿವೆ ಎನ್ನುವ ಸೈಬರ್ ವಂಚಕರ ಬೆದರಿಕೆಯಿಂದ ನೊಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83), ಪಾವಿಯಾ ನಜರತ್ (79) ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿಯಾಗಿದ್ದಾರೆ.
ಕಳೆದ ಒಂದು ತಿಂಗಳಿಂದ ಸೈಬರ್ ಖದೀಮರು ವೃದ್ಧ ದಂಪತಿ ಬೆನ್ನು ಬಿದ್ದು ಪೊಲೀಸರೆಂದು ಹೇಳಿಕೊಂಡು ನಿಮ್ಮ ನಗ್ನ ಚಿತ್ರಗಳಿವೆ ಎಂದು ವಿಡಿಯೋ ಕಾಲ್ ಮಾಡಿದ್ದರು. ಕೇಳಿದಷ್ಟು ಹಣ ಕೊಡದಿದ್ದರೆ ನಗ್ನ ಚಿತ್ರಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದರು. ಇದರಿಂದ ಈಗಾಗಲೇ ಅವರ ಖಾತೆಗೆ ವೃದ್ಧ ದಂಪತಿ 6 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದರು. ಹೀಗಿದ್ದರೂ ಮತ್ತಷ್ಟು ಹಣ ನೀಡುವಂತೆ ಪೀಡಿಸಲು ಶುರು ಮಾಡಿದ್ದರು.
ಖದೀಮರ ಕಿರಿಕಿರಿಗೆ ಬೇಸತ್ತು ಮೊದಲು ಪಾವಿಯಾ ಅವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದನ್ನು ಕಂಡು ಮನನೊಂದು ಪತಿ ಡಿಯಾಗೋ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಕುವಿನಿಂದ ಕತ್ತು, ಕೈ ಕೊಯ್ದುಕೊಂಡು ಡಿಯಾಗೋ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.