ಹೈದರಾಬಾದ್: ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿ ಸಹಾಯದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ 5 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಹೈದರಾಬಾದ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ಗೆ 190 ರನ್ ಗಳಿಗೆ ನಿಯಂತ್ರಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 16.1 ಓವರ್ ಗಳಲ್ಲಿಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಅಬ್ಬರದ ಬ್ಯಾಟಿಂಗ್ ನಿಂದ ಬೃಹತ್ ಮೊತ್ತ ದಾಖಲಿಸುವ ಮೂಲಕ ಗಮನ ಸೆಳೆಯುತ್ತಿರುವ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಮಾರಕ ದಾಳಿಯಿಂದ ತತ್ತರಿಸಿತು. ಶಾರ್ದೂಲ್ 4 ವಿಕೆಟ್ ಪಡೆದು ಮಿಂಚಿದರು.
ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಲಕ್ನೋ ಆರಂಭದಲ್ಲೇ ಮರ್ಕರಂ (1) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಆದರೆ ಮಿಚೆಲ್ ಮಾರ್ಷ್ ಮತ್ತು ನಿಕೊಲಸ್ ಪೂರನ್ ಎರಡನೇ ವಿಕೆಟ್ ಗೆ 116 ರನ್ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರು.
ಪೂರನ್ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿ ಔಟಾದರೆ, ಮಾರ್ಷ್ 31 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 52 ರನ್ ಬಾರಿಸಿ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದರು. ಕೊನೆಯ ಹಂತದಲ್ಲಿ ಅಬ್ದುಲ್ ಸಮದ್ 8 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 22 ರನ್ ಚಚ್ಚಿ ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಂಡು 200ಕ್ಕಿಂತ ಹೆಚ್ಚು ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು.
ಹೈದರಾಬಾದ್ ಪರ ಟ್ರಾವಿಸ್ ಹೆಡ್ (47), ನಿತಿಶ್ ಕುಮಾರ್ ರೆಡ್ಡಿ (32), ಹೆನ್ರಿಚ್ ಕ್ಲಾಸೆನ್ (26), ಅನಿಕೇತ್ ವರ್ಮಾ (36) ಮತ್ತು ಪ್ಯಾಟ್ ಕಮಿನ್ಸ್ (18) ತಕ್ಕಮಟ್ಟಿಗೆ ಹೋರಾಟ ನಡೆಸಿದರೂ ದೊಡ್ಡ ಮೊತ್ತ ಪೇರಿಸಲು ವಿಫಲರಾದರು.