ತೆರಿಗೆ ಸಮರ ಆರಂಭವಾದ ಹಿನ್ನೆಲೆಯಲ್ಲಿ ಅಮೆರಿಕದ ಹಾರ್ಲೆ ಡೆವಿಡ್ಸನ್ ಬೈಕ್ ಮತ್ತು ಬೌರ್ನ್ ಬಾನ್ ವಿಸ್ಕಿ ಮೇಲಿನ ಆಮದು ಸುಂಕ ಕಡಿತಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಅಮೆರಿಕ ಮತ್ತು ಭಾರತ ಆಮದು ಮತ್ತು ರಫ್ತು ಸುಂಕ ಹೇರಿಕೆ ಕುರಿತು ಮಾತುಕತೆ ನಡೆಸಲಿದ್ದು, ಇದಕ್ಕೂ ಮುನ್ನ ಅಮೆರಿಕದ ಪ್ರಮುಖ ವಸ್ತುಗಳ ಮೇಲೆ ಹೇರಲಾಗಿದ್ದ ಅಧಿಕ ಸುಂಕದಲ್ಲಿ ಕಡಿತ ಮಾಡಲು ಭಾರತ ಮುಂದಾಗಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುಂಕ ಸಮರ ಆರಂಭಿಸಿದ್ದು, ತಮ್ಮ ದೇಶದ ಉತ್ಪನ್ನಗಳ ಮೇಲೆ ಯಾವ ದೇಶ ಅಧಿಕ ಸುಂಕ ವಿಧಿಸುತ್ತದೆಯೋ ಆ ದೇಶದ ಉತ್ಪನ್ನಗಳ ಮೇಲೆ ಅಷ್ಟೇ ಸುಂಕ ಹೇರಲಾಗುವುದು ಎಂದು ಎಚ್ಚರಿಸಿದ್ದರು. ಅಲ್ಲದೇ ಭಾರತ ಜನರ ಮೇಲೆ ಭಾರೀ ಪ್ರಮಾಣದ ತೆರಿಗೆ ವಿಧಿಸುತ್ತಿದೆ.
ಇತ್ತೀಚೆಗಷ್ಟೇ ಭಾರತ ಹಾರ್ಲೆ ಡೆವಿಡ್ಸನ್ ಬೈಕ್ ಮೇಲಿನ ಸುಂಕವನ್ನು ಶೇ.50ರಿಂದ ಶೇ.40ಕ್ಕೆ ಕಡಿತ ಮಾಡಲಾಗಿದೆ. ಬೌರ್ ಬಾನ್ ವಿಸ್ಕಿ ಮೇಲೆ ಭಾರತ ಶೇ.150ರಷ್ಟು ಸುಂಕ ವಿಧಿಸಿದ್ದು, ಶೇ.100ಕ್ಕೆ ಇಳಿಕೆ ಮಾಡಲಾಗಿದೆ. ಇದೀಗ ಮತ್ತಷ್ಟು ಸುಂಕ ಇಳಿಸುವ ಕುರಿತು ಮಾತುಕತೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದೇ ವೇಳೆ ಕ್ಯಾಲಿಫೋರ್ನಿಯಾ ವೈನ್ ಗಳ ಮೇಲಿನ ಸುಂಕ ಕಡಿತ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಎರಡೂ ದೇಶಗಳ ನಡುವೆ ಸುಂಕ ಇಳಿಕೆ ಕುರಿತ ಮಾತುಕತೆ ವೇಳೆ ಕೇವಲ ಆಟೋಮೊಬೈಲ್ ಮತ್ತು ಪಾನೀಯಗಳ ಮೇಲಿನ ಸುಂಕ ಮಾತ್ರವಲ್ಲ, ವೈದ್ಯಕೀಯ ಉಪಕರಣ ಹಾಗೂ ಔಷಧಗಳ ಕುರಿತೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.