ನವದೆಹಲಿ:ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ವೈದ್ಯಕೀಯ ನೆರವು ನೀಡಲು ಹಿಂದೇಟು ಹಾಕುತ್ತಿರುವುದನ್ನು ಹೋಗಲಾಡಿಸಿ, ಜನರಲ್ಲಿ ಸಹಾಯ ಮನೋಭಾವನೆ ಮೂಡಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅಪಘಾತದ ಗಾಯಾಳುವಿನ ನೆರವಿಗೆ ಮುಂದಾಗುವವರಿಗೆ 25 ಸಾವಿರ ರೂ ಬಹುಮಾನ ಘೋಷಿಸಿದ್ದಾರೆ.
ಅಪಘಾತಗೊಂಡ ವ್ಯಕ್ತಿಗೆ ನೆರವು ನೀಡಲು ಮುಂದಾಗುವ ಯಾವುದೇ ಮೂರನೇ ವ್ಯಕ್ತಿಗೂ 25 ಸಾವಿರ ರೂಳ ಬಹುಮಾನ ನೀಡುತ್ತೇವೆ ಎಂದು ನಿತಿನ್ ಗಡ್ಕರಿ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅಪಘಾತದಿಂದ, ಅಥವಾ ಅಪಘಾತದ ಬಳಿಕ ವ್ಯಕ್ತಿಯು ಯಾವುದೇ ಆಸ್ಪತ್ರೆಗೆ ದಾಖಲಾದರೆ, ಅವರಿಗೆ ಒಂದೂವರೆ ಲಕ್ಷ ರೂವರೆಗೂ ಧನಸಹಾಯ ನೀಡಲಾಗುವುದು. ಅಥವಾ ಏಳು ವರ್ಷಗಳವರೆಗೆ ವೈದ್ಯರಿಂದ ಆಗುವ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಜಿಡಿಪಿಗೆ ಶೇ. 3 ನಷ್ಟ:
ದೇಶದಲ್ಲಿ ಪ್ರತೀ ವರ್ಷ 4,80,000 ಅಪಘಾತಗಳು ಸಂಭವಿಸುತ್ತವೆ. 18ರಿಂದ 45 ವರ್ಷ ವಯಸ್ಸಿನ 1.88 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ 10 ಸಾವಿರ ಮಂದಿ ಇದ್ದಾರೆ. ಇದು ದೊಡ್ಡ ಸಾರ್ಜನಿಕ ಆರೋಗ್ಯ ಸಮಸ್ಯೆಯೇ ಆಗಿದೆ. ಈ ರಸ್ತೆ ಅಪಘಾತಗಳಿಂದ ಜಿಡಿಪಿಗೆ ಶೇ. 3ರಷ್ಟು ನಷ್ಟವಾಗುತ್ತಿದೆ’ ಎಂದು ನಿತಿನ್ ಗಡ್ಕರಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕಳಪೆ ರಸ್ತೆಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ಕಳಪೆ ರಸ್ತೆ ನಿರ್ಮಾಣಕ್ಕೆ ಕಳಪೆ ಡಿಪಿಆರ್ಗಳು ಕಾರಣ. ಡಿಪಿಆರ್ ಕನ್ಸಲ್ಟೆಂಟ್ಗಳು ಇದಕ್ಕೆ ಜವಾಬ್ದಾರರು. ವೆಚ್ಚ ಉಳಿಸಲು ಅಥವಾ ಇನ್ಯಾವುದೋ ಕಾರಣಕ್ಕೆ ಸರಿಯಾಗಿ ಡಿಪಿಆರ್ ಸಿದ್ಧಪಡಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.