Menu

ಹನಿಟ್ರ್ಯಾಪ್ ತನಿಖೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಚಿವ ಕೆಎನ್ ರಾಜಣ್ಣ

kn rajanna

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಮಧುಬಲೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದ ಸಹಕಾರ ಸಚಿವ ಕೆಎನ್​ ರಾಜಣ್ಣ  ಪ್ರಕರಣದ ತನಿಖೆಗೆ ಆಗ್ರಹಿಸಿ ಸರ್ಕಾರಕ್ಕೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.

ಹನಿಟ್ರ್ಯಾಪ್​ ಯತ್ನ ನಡೆದಿರುವ ಬಗ್ಗೆ ಕಳೆದ ಶುಕ್ರವಾರ ಸದನದಲ್ಲಿ ಪ್ರಸ್ತಾಪಿಸಿ ಇಲ್ಲಿಯವರೆಗೆ ಯಾವುದೇ ದೂರು ನೀಡಿದೆ ಹಲವು ಉಹಾಪೋಹಗಳಿಗೆ ಕಾರಣವಾಗಿದ್ದ ರಾಜಣ್ಣ ಅವರು ಮಂಗಳವಾರ ಸದಾಶಿವನಗರದ ನಿವಾಸದಲ್ಲಿ ಡಾ. ಜಿ ಪರಮೇಶ್ವರ್ ಅವರಿಗೆ ಅಧಿಕೃತವಾಗಿ ಮನವಿ ನೀಡಿದ್ದಾರೆ.
ದೂರು ಸ್ವೀಕರಿಸಿದ ಗೃಹ ಸಚಿವರು ಪ್ರಕರಣವನ್ನು ಯಾವ ತನಿಖೆಗೆ ಆದೇಶಿಸುತ್ತಾರೆ ಎನ್ನುವುದು ಸದ್ಯದ ಕುತೂಹಲಕ್ಕೆ ಕಾರಣವಾಗಿದೆ.

ಹನಿಟ್ರ್ಯಾಪ್​ ಬಗ್ಗೆ ಕೆಲವು ಸುಳಿವನ್ನು ಬಿಟ್ಟುಕೊಟ್ಟಿರುವ ರಾಜಣ್ಣ ದೂರು ನೀಡಬೇಕೆಂದು ತೀರ್ಮಾನ ಮಾಡಿದ್ದರು. ಗೃಹ ಸಚಿವ ಪರಮೇಶ್ವರ್ ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ ಎಂದು ಹೇಳಿದ್ದರು. ಹೇಳಿದಂತೆಯೇ ರಾಜಣ್ಣ ನೆಲಮಂಗಲದಲ್ಲಿದ್ದ ಪರಮೇಶ್ವರ್​ ರನ್ನು ಹುಡುಕಿಕೊಂಡು ಹೋಗಿದ್ದರು.ಆದರೆ, ಇಲ್ಲಿ ಬೇಡ ಸದಾಶಿವನಗರದ ನಿವಾಸಕ್ಕೆ ಬನ್ನಿ ಎಂದು ಪರಮೇಶ್ವರ್ ಹೇಳಿ ಕಳುಹಿಸಿದ್ದರು. ಅದರಂತೆ ಇದೀಗ ರಾಜಣ್ಣ ಪರಮೇಶ್ವರ್​ ಅವರ ನಿವಾಸಕ್ಕೆ ಭೇಟಿ ನೀಡಿ ಮನವಿ ನೀಡಿದ್ದಾರೆ.

ಸಿಎಂ ಜೊತೆ ಚರ್ಚೆ:

ಸಚಿವ ರಾಜಣ್ಣ ಅವರ ದೂರನ್ನು ಸ್ವೀಕರಿಸಿ‌ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ ಸದನದಲ್ಲಿ ಹನಿಟ್ರ್ಯಾಪ್ ವಿಷಯ ಬಂದಾಗ ಸಚಿವ ರಾಜಣ್ಣನವರು ನನ್ನ ಮೇಲೂ ಪ್ರಯತ್ನ ಆಗಿದೆ ಎಂದು ಪ್ರಸ್ತಾಪಿಸಿ ಸರ್ಕಾರ, ಹಾಗೂ ಗೃಹ ಸಚಿವರಿಗೆ ಮನವಿ ಕೊಡುತ್ತೇನೆ ಎಂದು ಹೇಳಿದ್ದರು. ಇದು ನಿಜಾ ಆಗಿದ್ದರೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಹೇಳಿದ್ದೆ. ಆದರೆ, ರಾಜಣ್ಣ ಅವರಿಗೆ ಪೂರ್ವ ನಿಯೋಜಿತ ಕೆಲಸದ ನಡುವೆ ದೂರು ಕೊಡಲು‌ ಆಗಲಿಲ್ಲ ಇಂದು ನನಗೆ ಮನವಿ ಕೊಟ್ಟಿದ್ದಾರೆ. ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಂತೆ ಮನವಿ ಕೊಟ್ಟಿದ್ದು, ಮುಂದಿನ ಕ್ರಮದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ದಾಖಲೆಗಳಿಲ್ಲದೇ ಪರದಾಟ:

ಗೃಹ ಸಚಿವರಿಗೆ ದೂರು ನೀಡಿರುವ ರಾಜಣ್ಣ ಅವರು ಮಧುಬಲೆಯ ಸೂಕ್ತ ದಾಖಲೆಗಳು ಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಏಕೆಂದರೆ ಸಚಿವರ ಸರ್ಕಾರಿ ನಿವಾಸದಲ್ಲಿ ಸಿಸಿಟಿವಿಗಳೇ ಇಲ್ಲ. ಹೀಗಾಗಿ ಹನಿಟ್ರ್ಯಾಪ್​ ಗ್ಯಾಂಗ್​ ಬಂದು ಹೋಗಿರುವ ಯಾವುದೇ ವಿಡಿಯೋ ಸಾಕ್ಷಿಗಳು ಇಲ್ಲ.

ಸರ್ಕಾರಿ ನಿವಾಸದಲ್ಲೇ ಹನಿಟ್ರ್ಯಾಪ್​​ಗೆ ಯತ್ನಿಸಿದ್ದಾರೆ ಎಂದಿದ್ದ ರಾಜಣ್ಣ ಸದ್ಯ ಅದನ್ನು ಸಾಬೀತುಪಡಿಸಲು ದಾಖಲೆಗಳಿಲ್ಲದೇ ಪರದಾಡುವಂತಾಗಿದೆ. ಇದರಿಂದ ರಾಜಣ್ಣಗೆ ದೊಡ್ಡ ತಲೆ ನೋವಾಗಿದ್ದು, ಸರ್ಕಾರಿ ನಿವಾಸದಲ್ಲಿ ಸಿಟಿಟಿವಿ ಇಲ್ಲದಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಚಹರೆ ಬಿಚ್ಚಿಟ್ಟ ರಾಜಣ್ಣ:

ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಹೈಕಮಾಂಡ್ ಮುಂದೆಯೂ ಹೆಸರು ಹೇಳಲು ದಾಖಲೆ ಒದಗಿಸಬೇಕು. ಬಹಿರಂಗವಾಗಿ ಹೆಸರು ಹೇಳಲು ದಾಖಲೆಗಳನ್ನು ಒದಗಿಸಬೇಕು. ತನಿಖೆ ಶುರುವಾದರೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರಾಜಕೀಯವಾಗಿ ಎಚ್ಚರಿಕೆ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ. ಹನಿಟ್ರ್ಯಾಪ್ ವಿಚಾರವಾಗಿ ರಾಜಣ್ಣ ದೂರು ನೀಡಿದ್ದು, ಗೃಹ ಸಚಿವರು ಯಾವ ತನಿಖೆಗೆ ಆದೇಶಿಸುತ್ತಾರೆ ಎನ್ನುವುದು ಕುತೂಹಲಕರ ಸಂಗತಿಯಾಗಿದೆ.

ಹನಿಟ್ರ್ಯಾಪ್​ ಪ್ರಕರಣ:

ಬಜೆಟ್​ ಮೇಲಿನ ಚರ್ಚೆ ವೇಳೆ ಸಚಿವ ರಾಜಣ್ಣ ಅವರು ಸದನದಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್​ ಯತ್ನ ನಡೆದಿದೆ ಎಂದು ಬಹಿರಂಗಪಡಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ರಾಜಣ್ಣ ಅವರನ್ನ ಮಧುಬಲೆಗೆ ಬೀಳಿಸಲು ಪ್ರಯತ್ನಿಸಿದವರು ಯಾರು? ಈ ಹನಿಟ್ರ್ಯಾಪ್​​​ ಯತ್ನ ಹಿಂದೆ ಯಾರ ಕೈವಾಡ ಇದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲ್ಲೇ ಇವೆ. ಈ ಬಗ್ಗೆ ಕಾಂಗ್ರೆಸ್​​ ನಾಯಕರಲ್ಲಿ ಆರೋಪ-ಪ್ರತ್ಯಾರೋಪಗಳ ನಡೆದಿವೆ.

ಮತ್ತೊಂದೆಡೆ ಬಿಜೆಪಿ ನಾಯಕರು ಸಹ ಈ ಹನಿಟ್ರ್ಯಾಪ್​​ ಅನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಈ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ನೀಡುವಂತೆ ಪಟ್ಟು ಹಿಡಿದಿದೆ. ಹೀಗಾಗಿ ಗೃಹ ಸಚಿವ ಪರಮೇಶ್ವರ್ ಅವರೇ ಉನ್ನತ ಮಟ್ಟದ ತನಿಖೆ ಮಾಡಿಸಿವುದಾಗಿ ಸದನದಲ್ಲೇ ಘೋಷಿಸಿದ್ದರು. ಆದರೆ, ರಾಜಣ್ಣ ಅವರು ದೂರು ಕೊಟ್ಟ ಬಳಿಕ ಯಾವ ತನಿಖೆ ಎನ್ನುವುದನ್ನು ಹೇಳುವುದಾಗಿ ಪರಮೇಶ್ವರ್ ಹೇಳಿದ್ದರು. ಇದೀಗ ಕೊನೆಗೂ ರಾಜಣ್ಣ ಅವರು ದೂರು ನೀಡಿದ್ದು, ಅದ್ಯಾವ ತನಿಖೆಗೆ ಆದೇಶಿಸುತ್ತಾರೆ? ಆ ತನಿಖೆಯಿಂದ ಹನಿಟ್ರ್ಯಾಪ್​​ ಹಿಂದಿರುವವರನ್ನು ಪತ್ತೆ ಮಾಡಲಿದ್ದಾರೆಯೇ ಎನ್ನುವುದನ್ನು ಕಾದುನೋಡಬೇಕಿದೆ.

Related Posts

Leave a Reply

Your email address will not be published. Required fields are marked *