Wednesday, November 05, 2025
Menu

ರಾಜ್ಯ ಇತಿಹಾಸದಲ್ಲೇ 18 ಸಾವಿರ ಮೆ.ವ್ಯಾ. ದಾಖಲೆ ಪ್ರಮಾಣದ ವಿದ್ಯುತ್ ಬೇಡಿಕೆ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಕಳೆದ ಎರಡು ತಿಂಗಳಲ್ಲಿ ಗರಿಷ್ಠ ಬೇಡಿಕೆ ಅವಧಿ (ಪೀಕ್ ಅವರ್ ಡಿಮಾಂಡ್) ಯಲ್ಲಿ 18 ಸಾವಿರ ಮೆಗಾವ್ಯಾಟ್ ದಾಟಿದೆ. ಏಪ್ರಿಲ್ ತಿಂಗಳಲ್ಲಿ 18,500 ಮೆಗಾವ್ಯಾಟ್ ತಲುಪುವ ಸಾಧ್ಯತೆ ಇದೆ.

ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮತ್ತು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, “ಕಳೆದ ಫೆಬ್ರವರಿಯಲ್ಲಿ ವಿದ್ಯುತ್ ಬೇಡಿಕೆ ಗರಿಷ್ಠ ಬೇಡಿಕೆ ಅವಧಿಯಲ್ಲಿ 18,350 ಮೆಗಾ ವ್ಯಾಟ್ ತಲುಪಿದ್ದರೆ, ಮಾರ್ಚ್ ತಿಂಗಳಲ್ಲಿ 18,395 ಮೆಗಾ ವ್ಯಾಟ್ ಗೆ ಏರಿಕೆಯಾಗಿದೆ. ಮಾ. 7ರಂದು ಗರಿಷ್ಠ ವಿದ್ಯುತ್ ಬೇಡಿಕೆ 18,395 ಮೆಗಾ ವ್ಯಾಟ್ ತಲುಪಿತ್ತು ಎಂದು ಹೇಳಿದರು.

“ಕೋವಿಡ್ ಬಳಿಕ ವಿದ್ಯುತ್ ಬೇಡಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಗರಿಷ್ಠ ವಿದ್ಯುತ್ ಬೇಡಿಕೆ 2020-21ನೇ ಸಾಲಿನಲ್ಲಿ 14,367 ಮೆಗಾವ್ಯಾಟ್ ಇದ್ದರೆ, 2021-22ರಲ್ಲಿ 14,818 ಮೆ.ವ್ಯಾ., 2022-23ರಲ್ಲಿ 15,828 ಮ.ವ್ಯಾ. ಇದ್ದರೆ, 2023-24ರಲ್ಲಿ 17,220 ಮೆ.ವ್ಯಾ. ಇತ್ತು. ಈ ಬಾರಿ 18,385 ಮೆ.ವ್ಯಾ.ಗೆ ಏರಿಕೆಯಾಗಿದೆ. ಅದೇ ರೀತಿ ಪ್ರಸ್ತುತ ಗರಿಷ್ಠ ವಿದ್ಯುತ್ ಬಳಕೆ 357 ಮಿಲಿಯನ್ ಯೂನಿಟ್ ಇದೆ”, ಎಂದು ಮಾಹಿತಿ ನೀಡಿದರು.

“ಗರಿಷ್ಠ ಬೇಡಿಕೆ ಅವಧಿಯಲ್ಲಿ 2024ರ ಏಪ್ರಿಲ್ ತಿಂಗಳಲ್ಲಿ 16,985 ಮೆ.ವ್ಯಾ. ಬೇಡಿಕೆ ಬಂದಿದ್ದು, ಈ ವರ್ಷ 18,294 ಮೆ.ವ್ಯಾ. ತಲುಪುವ ಅಂದಾಜಿದೆ. ಅಂದರೆ ವಿದ್ಯುತ್ ಬೇಡಿಕೆಯಲ್ಲಿ ಶೇ. 8.1ರಷ್ಟು ಹೆಚ್ಚಳವಾಗಲಿದೆ. ಅದೇ ರೀತಿ 2024ರ ಮೇ ತಿಂಗಳಲ್ಲಿ 16,826 ಮೆ.ವ್ಯಾ. ಬೇಡಿಕೆ ಬಂದಿದ್ದು, ಈ ಬಾರಿ 17,122 ಮೆ.ವ್ಯಾ.ಗೆ ಏರಿಕೆಯಾಗುವ (ಶೇ. 1.8ರಷ್ಟು ಹೆಚ್ಚಳ) ಅದಾಜು ಮಾಡಲಾಗಿದೆ. ಅಲ್ಲದೆ, ವಿದ್ಯುತ್ ಬಳಕೆ ಪ್ರಮಾಣ ಏಪ್ರಿಲ್ ತಿಂಗಳಲ್ಲಿ 352 ಮಿಲಿಯನ್ ಯೂನಿಟ್ ಮತ್ತು ಮೇ ತಿಂಗಳಲ್ಲಿ 331 ಮಿಲಿಯನ್ ಯೂನಿಟ್ ತಲುಪುವ ನಿರೀಕ್ಷೆಯಿದೆ ಎಂದು ವಿವರಿಸಿದರು.

ಬೇಡಿಕೆ ಪೂರೈಸಲು ಸಿದ್ಧತೆ

“ರಾಜ್ಯದಲ್ಲಿ ಏರಿಕೆಯಾಗಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 2024ರ ಡಿಸೆಂಬರ್ ನಿಂದ ಮೇ ತಿಂಗಳವರೆಗೆ ಬೇಡಿಕೆಗೆ ಅನುಗುಣವಾಗಿ ಉತ್ತರ ಪ್ರದೇಶದಿಂದ 100ರಿಂದ 1,400 (ಗರಿಷ್ಠ ಬೇಡಿಕೆ ಅವಧಿಯಲ್ಲಿ) ಮೆಗಾವ್ಯಾಟ್ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆಯಲಾಗುತ್ತಿದೆ. ಅದೇ ರೀತಿ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ಪಂಜಾಬ್ ನಿಂದ 200ರಿಂದ 531 ಮೆಗವ್ಯಾಟ್ ವಿದ್ಯುತ್ತನ್ನು ವಿನಿಮಯ ಆಧಾರದ ಮೇಲೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ”, ಎಂದರು.

“ಇದಲ್ಲದೆ, ಮಾ. 1ರಿಂದ 15ರವರೆಗೆ ಕೂಡಗಿಯಲ್ಲಿರುವ ಎನ್ ಟಿಪಿಸಿಯಿಂದ 310 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಪಡೆಯಲಾಗುತ್ತಿತ್ತು. ಮಾ. 15ರಿಂದ ಇನ್ನೂ ಹೆಚ್ಚುವರಿಯಾಗಿ 100 ಮೆ.ವ್ಯಾ. (ಒಟ್ಟು 410 ಮ.ವ್ಯಾ.) ವಿದ್ಯುತ್ ಪಡೆಯಲಾಗಿದೆ. ಜತೆಗೆ ಮಾರ್ಚ್ ತಿಂಗಳಿನಿಂದ ಮೇ ಅಂತ್ಯದವರೆಗೆ ಇಂಧನ ಸುರಕ್ಷತೆ ನೀತಿಯಡಿ ಇತರೆ ರಾಜ್ಯಗಳಿಂದ ಮಾಸಿಕ 1000 ಮೆ.ವ್ಯಾ. ವಿದ್ಯುತ್ ಪಡೆಯಲು ಪಿಸಿಕೆಎಲ್ ಒಪ್ಪಂದ ಮಾಡಿಕೊಂಡಿದೆ”, ಎಂದು ತಿಳಿಸಿದರು.

“ರೈತರಿಗೆ ದಿನದ 7 ಗಂಟೆ ತ್ರಿ ಫೇಸ್ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗಿದೆ. ಅನೇಕ ಕಡೆಗಳಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸೋಲಾರ್ ವಿದ್ಯುತ್ ಒದಗಿಸಲಾಗುತ್ತಿದೆ. ಕೆಲವೆಡೆ 7 ಗಂಟೆ ತ್ರಿ ಫೇಸ್ ವಿದ್ಯುತ್ ಪೂರೈಸಲು ಸಮಸ್ಯೆಯಾಗದಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ವಿದ್ಯುತ್ ಪೂರೈಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ (ತೋಟದ ಮನೆಗಳು ಸೇರಿ) ನೋಡಿಕೊಳ್ಳಲು ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತ್ ಒದಗಿಸಲಾಗುತ್ತಿದೆ”, ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *