ಸ್ಪಿನ್ನರ್ ನೂರ್ ಅಹ್ಮದ್ ಮಾರಕ ದಾಳಿ ಹಾಗೂ ರಚಿನ್ ರವೀಂದ್ರ ಅವರ ತಾಳ್ಮೆಯ ಅರ್ಧಶತಕದ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಚೆನ್ನೈನಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡವನ್ನು 9 ವಿಕೆಟ್ ಗೆ 155 ರನ್ ಗಳಿಗೆ ನಿಯಂತ್ರಿಸಿದ ಚೆನ್ನೈ ಸೂಪರ್ ಕಿಂಗ್ಸ್ 5 ಓವರ್ ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಸ್ಪಿನ್ನರ್ ಗಳಿಗೆ ನೆರವು ನೀಡುವ ಪಿಚ್ ನಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಅರ್ಧಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಚೆನ್ನೈ ಆರಂಭದಲ್ಲೇ ತ್ರಿಪಾಠಿ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಎರಡನೇ ವಿಕೆಟ್ ಗೆ 67 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಹೊಡಿಬಡಿ ಆಟಕ್ಕೆ ಇಳಿದ ಗಾಯಕ್ವಾಡ್ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 53 ರನ್ ಬಾರಿಸಿ ಔಟಾದರು.
ಈ ಹಂತದಲ್ಲಿ ಯುವ ಸ್ಪಿನ್ನರ್ ವಿಘ್ನೇಶ್ ಸ್ಪಿನ್ ಬಲೆಗೆ ಬಿದ್ದ ಚೆನ್ನೈ ನಾಟಕೀಯ ಕುಸಿತ ಅನುಭವಿಸಿತು. ಇದರಿಂದ ಚೆನ್ನೈ ಗೆಲುವಿನ ಹಾದಿ ದುರ್ಗಮವಾಯಿತು. ಆದರೆ ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿದ ರಚಿನ್ ರವೀಂದ್ರ 45 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 65 ರನ್ ಬಾರಿಸಿ ಔಟಾಗದೇ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಕೊನೆಯ ಹಂತದಲ್ಲಿ ರವೀಂದ್ರ ಜಡೇಜಾ (17) ಉತ್ತಮ ಬೆಂಬಲ ನೀಡಿದರೂ ಹೊಂದಾಣಿಕೆ ಕೊರತೆಯಿಂದ ರನೌಟ್ ಆಗಿ ಹೊರನಡೆದರು. ಧೋನಿ ಕೊನೆಯ 4 ರನ್ ಬೇಕಿದ್ದಾಗ ಕ್ರೀಸ್ ಗೆ ಬಂದರೂ ಒಂದೂ ರನ್ ಹೊಡೆಯದೇ ನಿರಾಸೆ ಮೂಡಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ ಮನ್ ಗಳು ನೆಲ ಕಚ್ಚಿಕೊಳ್ಳುವ ಮುನ್ನವೇ ಹೊಡಿಬಡಿ ಆಟಕ್ಕೆ ಮುಂದಾಗಿ ಅನಗತ್ಯವಾಗಿ ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿದರು. ಸ್ಪಿನ್ನರ್ ನೂರ್ ಅಹ್ಮದ್ 4 ವಿಕೆಟ್ ಪಡೆದು ಮುಂಬೈ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ಖಲೀಲ್ ಅಹ್ಮದ್ 3 ವಿಕೆಟ್ ಉರುಳಿಸಿದರು. ಮುಂಬೈ ಪರ ತಿಲಕ್ ವರ್ಮಾ (31), ಸೂರ್ಯಕುಮಾರ್ ಯಾದವ್ (29) ಮತ್ತು ದೀಪಕ್ ಚಾಹರ್ (28) ಮಾತ್ರ ಹೋರಾಟ ನಡೆಸಿದರು.