ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ತಂಡ ಒಡ್ಡಿದ ದಾಖಲೆ ಮೊತ್ತವನ್ನು ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ನಲ್ಲಿ 44 ರನ್ ನೊಂದಿಗೆ ವೀರೋಚಿತ ಸೋಲಿನೊಂದಿಗೆ ಅಭಿಯಾನ ಆರಂಭಿಸಿದೆ.
ಹೈದರಾಬಾದ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ ಗೆ 286 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 242 ರನ್ ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಂಗ್ ಬಲದಿಂದ ಗೆದ್ದ ಹೈದರಾಬಾದ್ ಶುಭಾರಂಭ ಮಾಡಿತು.
ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 50 ರನ್ ಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಸಂಜು ಸ್ಯಾಮ್ಸನ್ ಮತ್ತು ಧ್ರುವ ಜುರೆಲ್ ನಾಲ್ಕನೇ ವಿಕೆಟ್ ಗೆ 111 ರನ್ ಜೊತೆಯಾಟದಿಂದ ತಂಡದಲ್ಲಿ ಭರವಸೆ ಮೂಡಿಸಿದರು. ಸ್ಯಾಮ್ಸನ್ 37 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 66 ರನ್ ಬಾರಿಸಿ ಔಟಾದರೆ, ಧ್ರುವ ಜುರೆಲ್ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 70 ರನ್ ಚಚ್ಚಿದರು.
ಇವರಿಬ್ಬರು ಔಟಾದ ನಂತರ ಶಿರ್ಮೊನ್ ಹೆಟ್ಮೆಯರ್ 23 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 42 ರನ್ ಚಚ್ಚಿದರೆ, ಶುಭಂ ದುಬೆ 11 ಎಸೆತಗಳಲ್ಲಿ 1 ಬೌಂಡಿ ಮತ್ತು 4 ಸಿಕ್ಸರ್ ಒಳಗೊಂಡ 34 ರನ್ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ಸಮೀಪ ಕೊಂಡೊಯ್ದರು. ಹೈದರಾಬಾದ್ ಪರ ಸಿರ್ಮಜಿತ್ ಸಿಂಗ್ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್ ಗಳಿಸಿದರು.