Menu

ಐಪಿಎಲ್ 2025 ಉದ್ಘಾಟನಾ ಪಂದ್ಯದಲ್ಲೇ ಹಲವು ದಾಖಲೆ ಬರೆದ ಕೊಹ್ಲಿ!

virat kohli

ಚೇಸಿಂಗ್ ಮಾಸ್ಟರ್ ಹಾಗೂ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಐಪಿಎಲ್ ಟಿ-20 ಟೂರ್ನಿಯ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ 7 ವಿಕೆಟ್ ಗಳಿಂದ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಸೋಲಿಸಿತು. ಈ ಮೂಲಕ 2018ರ ಚೊಚ್ಚಲ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅನುಭವಿಸಿದ್ದ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿತು.

ಕಳೆದ ಎರಡು ಆವೃತ್ತಿಗಳಲ್ಲಿ ಸತತ ನಾಲ್ಕು ಪಂದ್ಯಗಳ ಸೋಲಿನ ನಂತರ ಮೊದಲ ಗೆಲುವು ದಾಖಲಿಸಿತು. ಕೆಕೆಆರ್ ಮತ್ತು ಆರ್ ಸಿಬಿ ನಡುವಿನ ಮುಖಾಮುಖಿಯಲ್ಲಿ ಗೆಲುವಿನ ಹಾದಿಗೆ ಮರಳಿದರೂ 20-15ರ ಗೆಲುವಿನ ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ವಿಶೇಷ ಅಂದರೆ ಮೇ 27ರಂದು ನಡೆಯುವ ಲೀಗ್ ನ ಕೊನೆಯ ಪಂದ್ಯದಲ್ಲೂ ಎರಡೂ ತಂಡಗಳು ಮುಖಾಮುಖಿ ಆಗಲಿದ್ದು, ಈ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಾದರೆ ಕೆಕೆಆರ್ 2 ತಿಂಗಳು ಕಾಯಬೇಕಾಗಿದೆ.

ಐಪಿಎಲ್ ಉದ್ಘಾಟನಾ ಆವೃತ್ತಿಯಿಂದ ಸತತ 18 ಆವೃತ್ತಿಗಳಲ್ಲಿ ಒಂದೇ ತಂಡದ ಪರ ಆಡಿರುವ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ, ಹಲವು ದಾಖಲೆಗಳನ್ನು ಬರೆದಿದ್ದಾರೆ.

1000 ರನ್ ಸರದಾರ: ಐಪಿಎಲ್ ಇತಿಹಾಸದಲ್ಲಿ 4 ತಂಡಗಳ ವಿರುದ್ಧ 1000ಕ್ಕೂ ಅಧಿಕ ರನ್​ ಕಲೆ ಹಾಕಿದ ಏಕೈಕ ಆಟಗಾರ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (1053), ಡೆಲ್ಲಿ ಕ್ಯಾಪಿಟಲ್ಸ್ (1057) ಮತ್ತು ಪಂಜಾಬ್ ಕಿಂಗ್ಸ್ (1030) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (1021) ವಿರುದ್ಧ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಡೇವಿಡ್ ವಾರ್ನರ್ 2 ತಂಡಗಳ ವಿರುದ್ಧ ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ.

ಅತ್ಯಧಿಕ ಅರ್ಧಶತಕ: ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನ ಪಡೆದಿದ್ದಾರೆ. ಡೇವಿಡ್ ವಾರ್ನರ್ (66) ಮೊದಲ ಸ್ಥಾನದಲ್ಲಿದ್ದರೆ, 64ನೇ ಅರ್ಧಶತಕ ಗಳಿಸಿದ ಕೊಹ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.

ಕೆಕೆಆರ್ ವಿರುದ್ಧ 1000 ರನ್ ಕಲೆಹಾಕಿದ ಮೂರನೇ ಬ್ಯಾಟರ್ ಕೊಹ್ಲಿ ಆಗಿದ್ದಾರೆ. ರೋಹಿತ್ ಶರ್ಮಾ (1070) ಮತ್ತು ಡೇವಿಡ್ ವಾರ್ನರ್ (1093) ಮಾತ್ರ ಈ ಸಾಧನೆ ಮಾಡಿದ್ದರು.

400 ಟಿ20 ಪಂದ್ಯಗಳು: ಟಿ-20 ಕ್ರಿಕೆಟ್​ನಲ್ಲಿ 400 ಪಂದ್ಯಗಳನ್ನಾಡಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿಗೂ ಮುನ್ನ ರೋಹಿತ್ ಶರ್ಮಾ (448) ಹಾಗೂ ದಿನೇಶ್ ಕಾರ್ತಿಕ್ (412) ಮಾತ್ರ ನಾನ್ನೂರು ಪಂದ್ಯಗಳನ್ನಾಡಿದ್ದರು.

Related Posts

Leave a Reply

Your email address will not be published. Required fields are marked *