ಉತ್ತರ ಪ್ರದೇಶದ ಸಹಾರನ್ಪುರದ ಗಂಗೋ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕರೊಬ್ಬರು ಪತ್ನಿ ಹಾಗೂ ಮೂವರು ಮಕ್ಕಳ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮತ್ತೊಬ್ಬ ಮಗ ಹಾಗೂ ಪತ್ನಿಯ ಸ್ಥಿತಿ ಗಂಭೀರವಾಗಿದೆ. ಬಿಜೆಪಿ ನಾಯಕ ಯೋಗೇಶ್ ರೋಹಿಲ್ಲಾ ಆರೋಪಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಈ ಕೃತ್ಯದ ಮಾಹಿತಿ ಪಡೆದ ಕೂಡಲೇ ಸಹರಾನ್‌ಪುರ ಎಸ್‌ಎಸ್‌ಪಿ ರೋಹಿತ್ ಸಜ್ವಾನ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪತ್ನಿ ಮೇಲೆ ಅನುಮಾನ ಹೊಂದಿದ್ದ ಯೋಗೇಶ್ ನಿತ್ಯ ಜಗಳವಾಡುತ್ತಿದ್ದ ಎನ್ನಲಾಗಿದೆ. ಆತ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಎಂದೂ ಹೇಳಲಾಗಿದೆ, ನೆರೆಹೊರೆಯವರೊಂದಿಗೆ ಬೇರೆಯವರೊಂದಿಗೆ ತಮ್ಮ ಸ್ಥಿತಿ ಬಗ್ಗೆ ಹೇಳಿಕೊಂಡಿರಲಿಲ್ಲ. ವಿಧಿವಿಜ್ಞಾನ ತಂಡದ ಜೊತೆ ಪೊಲೀಸ್ ಅಧಿಕಾರಿ ಗಳು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಕೃತ್ಯ ಎಸಗಿದ ಬಳಿಕ ಆರೋಪಿ ರೋಹಿಲ್ಲಾನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರ, ನಿಖರ ಕಾರಣವನ್ನು ಪೊಲೀಸರು ಕಲೆ ಹಾಕುವ ಕಾರ್ಯ ಮುಂದುವರಿಸಿದ್ದಾರೆ.