ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಗಾಜಿಯಾಬಾದ್‌ನಲ್ಲಿ ವಿವಾದಿತ ಅರ್ಚಕ ಯತಿ ನರಸಿಂಹಾನಂದ ಗಿರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ದಾಸ್ನಾ ದೇವಿ ದೇವಾಲಯದ ಅರ್ಚಕರು ಗಾಜಿಯಾಬಾದ್ ನಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ನರಸಿಂಹಾನಂದ್ ಅವರು ಮಹಾತ್ಮ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದರು. ಧಾರ್ಮಿಕ ಭಾವನೆಗಳನ್ನು ಕೆರಳಿಸುವ, ಕ್ರಿಮಿನಲ್ ಬೆದರಿಕೆ, ಅವಮಾನ, ಮಾನಹಾನಿ ಮತ್ತು ಸಾರ್ವಜನಿಕ ಶಾಂತಿಯನ್ನು ಕದಡುವ ಉದ್ದೇಶದ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ನರಸಿಂಹಾನಂದ ಅವರು ಗಾಜಿಯಾಬಾದ್ ಪೊಲೀಸ್ ಕಮಿಷನರ್ ಮತ್ತು ಲೋನಿಯ ಸಹಾಯಕ ಪೊಲೀಸ್ ಕಮಿಷನರ್ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ. ವಿಡಿಯೋದಲ್ಲಿ ದ್ವೇಷ ಹರಡುವ ಮತ್ತು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನರಸಿಂಹಾನಂದ ಅವರ ಹೇಳಿಕೆಗಳು ಕೋಮು ಸೌಹಾರ್ದತೆಯನ್ನು ಕೆರಳಿಸುವ ಮತ್ತು ಭಂಗಗೊಳಿಸುವ ಉದ್ದೇಶದಿಂದ ಕೂಡಿವೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಗ್ರಾಮೀಣ) ಸುರೇಂದ್ರ ನಾಥ್ ತಿವಾರಿ ಹೇಳಿದ್ದಾರೆ.