ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್ ಗಳಿಂದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಅವರದ್ದೇ ತವರಿನಲ್ಲಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಭರ್ಜರಿಯಾಗಿ ಶುಭಾರಂಭ ಮಾಡಿದೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೆಕೆಆರ್ ತಂಡವನ್ನು 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಆರ್ ಸಿಬಿ 16.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ 2008 ಉದ್ಘಾಟನಾ ಪಂದ್ಯದಲ್ಲಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅನುಭವಿಸಿದ್ದ ಹಳೆ ಸೋಲಿಗೆ ಸೇಡು ತೀರಿಸಿಕೊಂಡಿತು.
ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ವೈಯಕ್ತಿಕ ಅರ್ಧಶತಕ ಬಾರಿಸಿದ್ದೂ ಅಲ್ಲದೇ ಮೊದಲ ವಿಕೆಟ್ ಗೆ 95 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು.
ಫಿಲ್ ಸಾಲ್ಟ್ 31 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 56 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 59 ರನ್ ಬಾರಿಸಿ ಔಟಾಗದೇ ಉಳಿದರು. ದೇವದತ್ ಪಡಿಕಲ್ (10) ವಿಫಲರಾದರೆ, ನಾಯಕ ರಜತ್ ಪಟಿದಾರ್ (34 ರನ್, 16 ಎಸೆತ, 5 ಬೌಂಡರಿ, 1 ಸಿಕ್ಸರ್) ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ (15 ರನ್, 5 ಎಸೆತ, 2 ಬೌಂಡರಿ, 1 ಸಿಕ್ಸರ್) ತಂಡವನ್ನು ಗೆಲುವಿನತ್ತ ಮುನ್ನಡೆಯಲು ಉತ್ತಮ ಕಾಣಿಕೆ ನೀಡಿದರು.
ರಹಾನೆ-ಸುನೀಲ್ ಜೊತೆಯಾಟ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆಆರ್ ತಂಡ ನಾಯಕ ಅಜಿಂಕ್ಯ ರಹಾನೆ ಮತ್ತು ಸುನೀಲ್ ನಾರಾಯಣ್ ಸಿಡಿಲಬ್ಬರದ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರೂ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಅನುಭವಿಸಿ ಬೃಹತ್ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು.
ಆರಂಭಿಕ ಕ್ವಿಂಟನ್ ಡಿ ಕಾಕ್ (4) ವಿಕೆಟ್ ಬೇಗನೇ ಕಳೆದುಕೊಂಡರೂ ರಹಾನೆ ಮತ್ತು ಸುನೀಲ್ ನಾರಾಯಣ್ ಎರಡನೇ ವಿಕೆಟ್ ಗೆ 103 ರನ್ ಜೊತೆಯಾಟದಿಂದ ಭದ್ರ ಬುನಾದಿ ಹಾಕಿದರು. ರಹಾನೆ 31 ಎಸೆತದಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 56 ರನ್ ಸಿಡಿಸಿದರು. ಅರ್ಧಶತಕ ಸಿಡಿಸಿ ತಂಡದ ನಾಯಕ ಜವಾಬ್ದಾರಿ ನೀಡಿದ ಮಾಲೀಕ ಶಾರೂಖ್ ಖಾನ್ ನಿರ್ಧಾರ ಸಮರ್ಥಿಸಿಕೊಂಡರು. ಸುನೀಲ್ ನಾರಾಯಣ್ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 44 ರನ್ ಬಾರಿಸಿದರು.
ಸ್ಪಿನ್ನರ್ ಕೃನಾಲ್ ಪಾಂಡ್ಯ ಈ ಇಬ್ಬರು ಆಟಗಾರರನ್ನು ಔಟ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು. ಕೆಳ ಕ್ರಮಾಂಕದಲ್ಲಿ ರಘುವಂಶಿ (30) ರನ್ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಆರ್ ಸಿಬಿ ಪರ ಕೃನಾಲ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರೆ, ಜೋಷ್ ಹಾಜ್ಲೆವುಡ್ 2 ವಿಕೆಟ್ ಗಳಿಸಿದರು.