Menu

ಹನಿಟ್ರ್ಯಾಪ್ ಮಾಡುವವರು ನಿಮ್ಮ ಬಳಿ ಸುಮ್ಮನೆ ಬರುತ್ತಾರೆಯೇ?: ಡಿಕೆ ಶಿವಕುಮಾರ್‌

ಬೆಂಗಳೂರು/ ಭಾಗಮಂಡಲ: ಹಿಟ್ ಅಂಡ್ ರನ್ ರೀತಿ ಹನಿಟ್ರ್ಯಾಪ್ ಪ್ರಕರಣವೂ ಆಗಿದೆ. ನಾನು ಈ ಬಗ್ಗೆ ಗುರುವಾರದಂದೇ ಪೊಲೀಸರಿಗೆ ದೂರು ನೀಡಲಿ ಎಂದು ಸಲಹೆ ನೀಡಿದ್ದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ತಡ ಮಾಡಬಾರದು. ಇದರ ಬಗ್ಗೆ ಶೀಘ್ರ ತನಿಖೆಯಾಗಬೇಕು ಎಂದು ನಾನೂ ಒತ್ತಾಯ ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರಿನ ಸದಾಶಿವನಗರದ ನಿವಾಸ ಹಾಗೂ ಭಾಗಮಂಡಲದ ಹೆಲಿಪ್ಯಾಡ್ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

48 ಶಾಸಕರು ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ, ಸರ್ಕಾರದ ಸಚಿವರಿಗೆ ರಕ್ಷಣೆ ಇಲ್ಲವೇ ಎಂದು ಕೇಳಿದಾಗ, “ಯಾರು ಹೇಳಿದ್ದು ರಕ್ಷಣೆಯಿಲ್ಲವೆಂದು? ಸುಮ್ಮನೆ ಹನಿಟ್ರ್ಯಾಪ್ ಮಾಡುವವರು ನಿಮ್ಮ ಬಳಿ ಬರುತ್ತಾರೆಯೇ? ನೀವು ಹಲೋ ಎಂದರೆ ಅವರು ಹಲೋ ಎನ್ನುತ್ತಾರೆ. ನೀವು ಪ್ರತಿಕ್ರಿಯೆ ನೀಡಲಿಲ್ಲ ಎಂದರೆ ಯಾರಾದರೂ ಮಾತನಾಡಿಸುತ್ತಾರಾ? ಮಾಧ್ಯಮದವರು ಮಾತಾನಾಡಿಸಿದರೆ ನಾನು ಮಾತನಾಡಿಸುತ್ತೇನೆ” ಎಂದು ಕಾಲೆಳೆದರು.

ಮಾಡಿದ್ದುಣ್ಣೋ ಮಹಾರಾಯ

ಹನಿಟ್ರ್ಯಾಪ್ ಹಿಂದೆ ಡಿ.ಕೆ.ಶಿವಕುಮಾರ್ ತಂಡವಿದೆ ಎನ್ನುವ ಶಾಸಕ ಮುನಿರತ್ನ ಆರೋಪದ ಬಗ್ಗೆ ಕೇಳಿದಾಗ, “ವಿಧಾನಸೌಧದಲ್ಲಿ ಅವರು ಏನೆಲ್ಲಾ ಮಾಡಿದ್ದರು ಎನ್ನುವುದು ಪೊಲೀಸ್ ದೂರಿನಲ್ಲಿ ಇದೆಯಲ್ಲವೇ? ಆರ್.ಅಶೋಕ್ ಗೆ, ಯಡಿಯೂರಪ್ಪ ಅವರಿಗೆ ಏನೋ ಆಯಿತು ಎಂದು ಬಿಜೆಪಿಯವರೇ ಮಾತನಾಡುತ್ತಿದ್ದರಲ್ಲವೇ? ಅವರ ನೋವನ್ನು ಅವರು ಹೇಳಿಕೊಂಡಿದ್ದಾರೆ. ಮಾಡಿದ್ದುಣ್ಣೋ ಮಾರಾಯ. ಅವರ ಪಕ್ಷದವರಿಗೆ ಹೇಳಿ ಒಂದೊಳ್ಳೆ ಆಸ್ಪತ್ರೆಗೆ ಸೇರಿಸಿ ಪರೀಕ್ಷೆ ಮಾಡಿಸಲಿ. ಅವರಿಗೆ ಒಂದಷ್ಟು ತೊಂದರೆಗಳಿವೆ” ಎಂದು ವ್ಯಂಗ್ಯವಾಡಿದರು.

ಕರ್ನಾಟಕದ ಬಂದ್ ಅವಶ್ಯಕತೆಯಿಲ್ಲ

ನಾಳಿನ (ಮಾ.22) ಕರ್ನಾಟಕ ಬಂದ್ ಬಗ್ಗೆ ಕೇಳಿದಾಗ, “ರಾಜ್ಯದ ಹಿತಕ್ಕೆ ಒಳ್ಳೆ ಕೆಲಸಕ್ಕೆ ಏನಿದ್ದರೂ ನಾವು ಬೆಂಬಲ ನೀಡುತ್ತೇವೆ. ಕಾನೂನಿನಲ್ಲಿ ಇರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕು. ಯಾವ ಗಲಾಟೆಗಳನ್ನೂ ಮಾಡದೆ, ಯಾವ ಬಂದ್ ಕೂಡ ಮಾಡದೇ ದಯವಿಟ್ಟು ಎಲ್ಲರೂ ಶಾಂತರೀತಿಯಿಂದ ಇರಬೇಕು ಎಂದು ಮನವಿ ಮಾಡುತ್ತೇನೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *