ಬೆಂಗಳೂರು: ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಹನಿಟ್ರ್ಯಾಪ್ ಬಲೆಗೆ ಕೆಡವಲು ನಡೆಸಿರುವ ಪ್ರಯತ್ನ ಬುಧವಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು.
ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ ಬಿಜೆಪಿಯ ಸುನೀಲ್ ಕುಮಾರ್ ‘ ವಿರೋಧಿಗಳನ್ನು ಹತ್ತಿಕ್ಕಲು ಈ ರೀತಿ ಕೆಲಸ ಮಾಡೋದು ಸರಿಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹನಿಟ್ರ್ಯಾಪ್ ಮೂಲಕ ಮುಖಂಡರನ್ನು ಬೀಳಿಸಿಕೊಳ್ಳಲಾಗುತ್ತಿದೆ. ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ಆಗಿತ್ತು ಎಂದು ಆರೋಪಿಸಿದರು.
ಸಚಿವ ಕೆಎನ್ ರಾಜಣ್ಣ ಹಾಗೂ ಅವರ ಪುತ್ರನ ವಿರುದ್ಧ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂಬ ಸುದ್ದಿಗಳು ಹರಡುತ್ತಿವೆ. ಈ ಬಗ್ಗೆ ತನಿಖೆ ನಡೆಯಬೇಕು. ರಾಜ್ಯದಲ್ಲಿ ಇಂತಹ ಹೀನ ಕೆಲಸಗಳನ್ನ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಸಚಿವರು, ಆಡಳಿತ ಪಕ್ಷದ ಶಾಸಕರು ಅಲ್ಲದೇ ಪ್ರತಿಪಕ್ಷಗಳ ಹಲವು ಶಾಸಕರ ಮೇಲೆ ಹನಿಟ್ರ್ಯಾಪ್ ಮಾಡಲಾಗುತ್ತಿದೆ. ಇದರಲ್ಲಿ ಯಾರಿದ್ದಾರೆ ಎಂಬ ಸತ್ಯ ಹೊರಗೆ ಬರಬೇಕಿದೆ ಎಂದು ಪಾಟೀಲ್ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆಎನ್. ರಾಜಣ್ಣ, ನನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಆಗಿರುವುದು ನಿಜ. ನನ್ನ ಮೇಲೆ ಮಾತ್ರವಲ್ಲ ಹಲವು ಮುಖಂಡರ ಮೇಲೂ ಆಗಿದೆ. ನನಗೆ ದೊರೆತ ಮಾಹಿತಿ ಪ್ರಕಾರ ೪೨ ಮುಖಂಡರ ಪೆನ್ ಡ್ರೈವ್ ಮತ್ತು ಸಿಡಿ ಸಂಗ್ರಹಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯದ ಶಾಸಕರು ಮಾತ್ರವಲ್ಲ, ಕೇಂದ್ರದ ಹಲವು ನಾಯಕರ ವಿರುದ್ಧವೂ ಹನಿಟ್ರ್ಯಾಪ್ ಮಾಡಿ ಸಿಡಿ, ಪೆನ್ ಡ್ರೈವ್ ಸಂಗ್ರಹಿಸಲಾಗಿದೆ ಎಂದು ಅವರು ಆರೋಪಿಸಿದರು.
ರಾಜಣ್ಣ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಸದನಕ್ಕೆ ಭರವಸೆ ನೀಡಿದರು. ಯತ್ನಾಳ್ ಸೇರಿ ಕೆಲವು ಸದಸ್ಯರು ಬಹಳ ಗಂಭೀರವಾದ ವಿಷಯ ಎತ್ತಿದ್ದಾರೆ. ಇದು ಈ ಸದನದ ಪ್ರತಿಯೊಬ್ಬ ಸದಸ್ಯನ ಪ್ರಶ್ನೆ, ಇದಕ್ಕೆ ಒಂದು ಫುಲ್ ಸ್ಟಾಪ್ ಹಾಕಬೇಕು ಎಂದರು.
ಸರ್ಕಾರವೇ ಹನಿ ಟ್ರ್ಯಾಪ್ ಫ್ಯಾಕ್ಟರಿ ಇಟ್ಟುಕೊಂಡಿದೆ ಸರ್ಕಾರವೇ ಹನಿ ಟ್ರ್ಯಾಪ್ ಫ್ಯಾಕ್ಟರಿ ಇಟ್ಟುಕೊಂಡರೆ ಯಾರಿಗೆ ಬುದ್ದಿ ಹೇಳುತ್ತೀರಿ ನೀವು? ಯಾರಿಗೆ ಉಪದೇಶ ಮಾಡ್ತೀರಾ? ಇದರ ಬಗ್ಗೆ ಗೃಹ ಇಲಾಖೆ ಒಂದು ಕ್ರಮ ತೆಗೆದುಕೊಳ್ಳಬೇಕು. ಯಾರು ಇದ್ದಾರೆ ಎನ್ನುವುದು ಆ ಮೇಲೆ ಮೊದಲು ಕ್ರಮ ಆಗಬೇಕು. ಇಂತಹ ಅಸಹ್ಯವನ್ನು ಚಟುವಟಿಕೆಗಳನ್ನ ರಾಜಕಾರಣಿಗಳಿಗೆ ಬಳಸಬಾರದು, ಅದು ಯಾರಾದರೂ ಆಗಲಿ ಎಂದು ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ವಿರೋಧಿಗಳನ್ನು, ಸ್ವಪಕ್ಷೀಯರನ್ನ ಹತ್ತಿಕ್ಕಲು ಬೇರೆ ಮಾರ್ಗ ಇಲ್ಲವೇನು. ಇದರ ಬಗ್ಗೆ ಒಂದುಗೂಡಿ ಕೈ ಜೋಡಿಸಬೇಕು. ಈ ಸರ್ಕಾರ ಅಪರಾಧಿಗಳಿಗೆ ಒಂದು ಸಿಂಹಸ್ವಪ್ನ ಆಗಿದೆ ಎಂಬ ಸಂದೇಶ ಕಳಿಸಿ ಎಂದು ಒತ್ತಾಯಿಸಿದರು.
ಗಂಡಭೇರುಂಡ ಹಾಕಿಕೊಳ್ಳಲು ಆಗಲ್ಲ ಎಂದರೆ ಗುಬ್ಬಚ್ಚಿ ಹಾಕಿಕೊಳ್ಳಿ. ಗಂಡಭೇರುಂಡ ಹಾಕಿಕೊಂಡ ನಂತರ ಗಂಡಸ್ಥರ ಸರ್ಕಾರ ನಡೆಸಬೇಕು. ಯಾರು ಬೇಕಾದರೂ ಏನು ಬೇಕಾದರೂ ಮಾಡಬಹುದು ಎನ್ನುವಂತದ್ದು ಬೇಡ. ಸಮಾಜಘಾತುಕ ಚಟುವಟಿಕೆ ಮಾಡಿದ್ರೆ ಸಾಸಿವೆ ಕಾಳಷ್ಟು ಸಹಿಸಲ್ಲ ಎಂದು ಕ್ರಮದ ಮೂಲಕ ತಿಳಿಸಿ ಎಂದರು.
ಗೃಹ ಇಲಾಖೆ ನಡೆಸಲು ಇಷ್ಟ ಇಲ್ಲವಾ, ಅಥವಾ ಇಲಾಖೆಯಲ್ಲಿ ಯಾರಾದರೂ ಕೈ ಆಡಿಸುತ್ತಿದ್ದಾರಾ? ಇಲಾಖೆ ನಡೆಸಲು ಗೃಹ ಸಚಿವರಿಗೆ ಸ್ವಾತಂತ್ರ್ಯ ಇಲ್ಲವಾ ಎಂದು ವಾಗ್ದಾಳಿ ನಡೆಸಿದರು.